ಬೆಂಗಳೂರು : ವಾಯುಮಾಲಿನ್ಯದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ ಹಾದಿಯಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರು ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿಯುತ್ತಿದೆ ಎಂದು ವರದಿಯೊಂದು ಹೇಳಿದೆ.
ಖಾಸಗಿ ಹವಾಮಾನ ಸಂಸ್ಥೆ ಆ್ಯಕ್ಯು ವೆದರ್ ಈ ಬಗ್ಗೆ ವರದಿ ಮಾಡಿದ್ದು, ಬೆಂಗಳೂರಿನ ಇಂದಿನ ಗಾಳಿಯ ಗುಣಮಟ್ಟವನ್ನು ತಲುಪಿದೆ. ಇದು ಸೂಕ್ಷ್ಮ ಸಮುದಾಯದ ಜನರ ಗುಂಪುಗಳಿಗೆ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಅನಾವಶ್ಯಕ ಹೊರಗಿನ ಓಡಾಟ ತಪ್ಪಿಸಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಬೆಂಗಳೂರಿನ ಇಂದಿನ ವಾಯು ಗುಣಮಟ್ಟ PM 2.6 75 ಆಗಿದ್ದು, PM 10 ನ ಪ್ರಮಾಣ 51ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ಕಳಪೆ ಎಂದು ಆ್ಯಕ್ಯುವೆದರ್ ವರದಿ ಮಾಡಿದೆ.
ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 ಪ್ರಮಾಣ 23ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ ಪ್ರಮಾಣ 13ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ 2ರಷ್ಟಿದ್ದು, ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.