ಮೈಸೂರು : ನಗರದಲ್ಲಿ ನಿರ್ಮಿಸಿರುವ ತೋಟಗಾರಿಕೆ ಪಿತಮಹಾ ಡಾ.ಎಚ್.ಎಂ.ಮರೀಗೌಡರ ಕಂಚಿನ ಪ್ರತಿಮೆಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ನಗರದ ಕರ್ಜನ್ ಪಾರ್ಕಿನ ಆವರಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಮರೀಗೌಡರ ಸ್ಮರಣಾರ್ಥ ೧೨ ಅಡಿ ಎತ್ತರದಲ್ಲಿ ಕಂಚಿನ ಪ್ರತಿಮೆ ಅನಾವರಣ ಮಾಡಿದರು. ಪ್ರತಿಮೆಯು ೭ ಅಡಿ ಪೀಠವಿದ್ದರೆ, ಐದು ಅಡಿ ಮರೀಗೌಡರ ಕಂಚಿನ ಪ್ರತಿಮೆ ಇದೆ. ಪ್ರತಿಮೆ ೧ ಟನ್ ತೂಕವಿದೆ.
ಈ ಸಂದರ್ಭದಲ್ಲಿ ಮರೀಗೌಡರ ಕುರಿತು ಡಾ.ಎಲ್. ಹನುಮಯ್ಯ ಅವರ ಸಂಪಾದಕತ್ವ ಮತ್ತು ಎನ್.ಮರಿತಾಯಪ್ಪ ಅವರ ಸಹ ಸಂಪಾದಕತ್ವದಲ್ಲಿ ರಚನೆಯಾದ ತೋಟಗಾರಿಕೆ ಪಿತಾಮಹ ಡಾ.ಎಚ್.ಎಂ.ಮರೀಗೌಡರ ದಕ್ಷ ಆಡಳಿತ ಮತ್ತು ದೂರ ದೃಷ್ಟಿ ಕುರಿತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಪ್ರತಿಮೆ ಅನಾವರಣಗೊಳಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಅವರ ಕಾಲದಲ್ಲಿ ಕರ್ನಾಟಕದಲ್ಲಿ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಯ ರೂವಾರಿಯಾಗಿದ್ದರು. ಸರ್ಕಾರಿ ಅಧಿಕಾರಿಯಾಗಿ ನಿಷ್ಠೆ ಹಾಗೂ ಬದ್ಧತೆಯಿಂದ ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದರು. ಅವರ ಸಾಧನೆಗಳು ಎಲ್ಲರಿಗೂ ಸ್ಫೂರ್ತಿ ತರಲಿದೆ ಎಂದು ತಿಳಿಸಿದರು
ಮಾಹಿತಿ ಪಡೆದು ಪರಿಶೀಲನೆ : ಹುಲಿ ಉಗುರು ಧರಿಸಿದ ಬಗ್ಗೆ ನಟರಾದ ದರ್ಶನ್ ಹಾಗೂ ಜಗ್ಗೇಶ್ ಅವರ ಪ್ರಕರಣ ದಾಖಲಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಾಪೌರ ಶಿವಕುಮಾರ್, ಶಾಸಕರಾದ ಕೆ.ಹರೀಶ್ ಗೌಡ, ಡಿ ರವಿಶಂಕರ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ತಿನ ಸದಸ್ಯ ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ, ತೋಟಗಾರಿಕೆ ಸಂಘದ ಪ್ರಭಾಮಂಡಲ್, ಶಶಿಕಲಾ ನಾಗರಾಜು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜು, ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಹಿರಿಯ ಸಹಾಯಕ ನಿರ್ದೇಶಕಿ ಸುವೇದಾ, ನವೀನ್ ಕಾರ್ಯಕ್ರಮದಲ್ಲಿದ್ದರು.