Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಗಾಜಾ ಯುದ್ಧ: ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಮಾರಾಟ ನಿಲ್ಲಿಸಿದ ಭಾರತೀಯ ಸಂಸ್ಥೆ

ಬೆಂಗಳೂರು: ಹಮಾಸ್ ಉಗ್ರರ ದಾಳಿ ಹಿನ್ನಲೆಯಲ್ಲಿ ಗಾಜಾ ಪಟ್ಟಿಯಲ್ಲಿ ಸೇನಾದಾಳಿ ನಡೆಸುತ್ತಿರುವ ಇಸ್ರೇಲ್ ನಡೆಯನ್ನು ಖಂಡಿಸಿ ಭಾರತ ಮೂಲದ ಬಟ್ಟೆತಯಾರಿಕಾ ಸಂಸ್ಥೆಯೊಂದು ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಮಾರಾಟವನ್ನೇ ನಿಲ್ಲಿಸಿದೆ.

ಭಾರತ ಮೂಲದ ಮರಿಯನ್ ಅಪರಲ್ ಸಂಸ್ಥೆ ಇಸ್ರೇಲಿ ಪೊಲೀಸರಿಗೆ ಸಮವಸ್ತ್ರವನ್ನು ತಯಾರಿಸುವ ದೀರ್ಘಕಾಲದ ಒಪ್ಪಂದವನ್ನು ರದ್ದುಗೊಳಿಸಿದ್ದು, ಗಾಜಾದಲ್ಲಿನ ಯುದ್ಧದ ಹಿನ್ನಲೆಯಲ್ಲಿ ತಾನು “ನೈತಿಕ ನಿರ್ಧಾರ” ತೆಗೆದುಕೊಂಡಿರುವುದಾಗಿ ಶುಕ್ರವಾರ AFP ಸುದ್ದಿಸಂಸ್ಥೆಗೆ ತಿಳಿಸಿದೆ.

2015 ರಿಂದ ಪ್ರತಿ ವರ್ಷ ಇಸ್ರೇಲ್‌ನ ಪೋಲೀಸ್ ಪಡೆಗೆ ಸುಮಾರು 100,000 (1ಲಕ್ಷ) ಸಮವಸ್ತ್ರಗಳನ್ನು ಈ ದಕ್ಷಿಣ ಕೇರಳದ ಸಂಸ್ಥೆ ಪೂರೈಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಒಲಿಕಲ್ ಅವರು, “ಇದು ನೈತಿಕ ನಿರ್ಧಾರ”. ಆಸ್ಪತ್ರೆಯ ಮೇಲಿನ ದಾಳಿ ಮತ್ತು ಸಂಘರ್ಷದಲ್ಲಿ “ಸಾವಿರಾರು ಅಮಾಯಕರ ಜೀವಗಳನ್ನು ಕಳೆದುಕೊಂಡಿರುವುದು” ನಾವು ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

ಅಲ್ಲದೆ ೃತನ್ನ ಸಂಸ್ಥೆಯು ಇಸ್ರೇಲ್‌ಗೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ ಸಮವಸ್ತ್ರಗಳನ್ನು ಪೂರೈಸಲಿದ್ದು, ಈ ಒಪ್ಪಂದ ಡಿಸೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಒಪ್ಪಂದ ನವೀಕರಣವನ್ನು ಸ್ಥಗಿತಗೊಳಿಸಿದೆ. ಹೊಸ ಆರ್ಡರ್ ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಇಸ್ರೇಲ್ ಗಾಜಾ ಪಟ್ಟಿ ಮೇಲಿನ ದಾಳಿ ನಿಲ್ಲಿಸಿ ಅಲ್ಲಿ ಶಾಂತಿಯನ್ನು ಪುನಃಸ್ಥಾಪಿಸಿದ ನಂತರ ನಾವು ಅವರೊಂದಿಗೆ ಮತ್ತೆ ವ್ಯವಹಾರವನ್ನು ಪುನರಾರಂಭಿಸುವ ಕುರಿತು ಯೋಚಿಸುತ್ತೇವೆ ಎಂದು ಒಲಿಕಲ್ ಹೇಳಿದ್ದಾರೆ.

ಮರಿಯನ್ ಅಪರಲ್ ಸಂಸ್ಥೆ ಇಸ್ರೇಲಿ ಪೊಲೀಸರಿಗೆ ಸಮವಸ್ತ್ರವನ್ನು ತಯಾರಿಸುವ ಒಪ್ಪಂದಕ್ಕಾಗಿಯೇ ಸುಮಾರು 1,500 ಜನರನ್ನು ನೇಮಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಇಸ್ರೇಲ್ ಮಾತ್ರವಲ್ಲದೇ ಫಿಲಿಪೈನ್ ಸೈನ್ಯಕ್ಕೆ ಮತ್ತು ಸೌದಿ ಅರೇಬಿಯಾದ ಸರ್ಕಾರಿ ಅಧಿಕಾರಿಗಳಿಗೂ ಕೂಡ ಸಮವಸ್ತ್ರವನ್ನು ಪೂರೈಸುತ್ತಿದೆ.

ಗಾಜಾಪಟ್ಟಿ ಅಪ್ಡೇಟ್
ಇನ್ನು ಗಾಜಾದಲ್ಲಿನ ಆಸ್ಪತ್ರೆ ಮೇಲಿನ ದಾಳಿಯನ್ನು ಜಾಗತಿಕ ನಾಯಕರು ಒಕ್ಕೊರಲಿನಿಂದ ಖಂಡಿಸಿದ್ದಾರೆ ಮತ್ತು ಮುಸ್ಲಿಂ ರಾಷ್ಟ್ರಗಳಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಇತ್ತ ಆಸ್ಪತ್ರೆ ಮೇಲೆ ದಾಳಿ ಮಾಡಿದವರ ಕುರಿತು ಸಾಕಷ್ಚು ಗೊಂದಲಗಳು ಏರ್ಪಟ್ಟಿದ್ದು, ಹಮಾಸ್ ಸಂಘಟನೆ ಇಸ್ರೇಲ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರೆ, ಇತ್ತ ಇಸ್ರೇಲ್ ಸೇನೆ ಹಮಾಸ್ ಉಗ್ರ ಸಂಘಟನೆಯ ವಿರುದ್ಧ ಆರೋಪಿಸುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಕೆಲ ವಿಡಿಯೋ ಸಾಕ್ಷ್ಯಗಳನ್ನೂ ಕೂಡ ಇಸ್ರೇಲ್ ಬಿಡುಗಡೆ ಮಾಡಿದ್ದು, ಹಮಾಸ್ ಉಗ್ರರು ಇಸ್ರೇಲ್ ನತ್ತ ಸಿಡಿಸಿದ ಕ್ಷಿಪಣಿಗಳಲ್ಲೇ ಕೆಲ ಕ್ಷಿಪಣಿಗಳು ಹಾದಿ ತಪ್ಪಿ ಅಲ್ಲಿನ ಆಸ್ಪತ್ರೆಗಳ ಮೇಲೆ ಅಪ್ಪಳಿಸಿದೆ ಎಂದು ಹೇಳಿದೆ. ಅಲ್ಲದೆ ಇಸ್ರೇನ್ ನ ಈ ಹೇಳಿಕೆಯನ್ನು ಅಮೆರಿಕ ಕೂಡ ಒಪ್ಪಿಕೊಂಡಿದ್ದು, ಹಮಾಸ್ ನತ್ತ ಆರೋಪವನ್ನು ಹೊರಿಸಿದೆ.

ಇತ್ತ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಆಸ್ಪತ್ರೆ ಮೇಲಿನ ದಾಳಿಯ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿದ್ದು, ಈ ದಾಳಿಯಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 471ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಆದರೂ ಆ ಸಂಖ್ಯೆಯು ವಿವಾದಾಸ್ಪದವಾಗಿದ್ದು, ಸಾವಿಗೀಡಾದವರ ಶವಗಳು ಏನಾದವು ಎಂದು ಇಸ್ರೇಲ್ ಪ್ರಶ್ನಿಸುತ್ತಿದೆ. ಅಲ್ಲದೆ ಇಸ್ರೇಲ್ ಗುಪ್ತಚರ ಮೂಲ ತಿಳಿಸಿರುವಂತೆ ಆಸ್ಪತ್ರೆ ಮೇಲಿನ ದಾಳಿಯಿಂದ 100 ರಿಂದ 300 ಜನರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ