ಲಂಡನ್ : ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಝಾಯಿ ಅವರು ಫೆಲೆಸ್ತೀನ್‌ನಲ್ಲಿ ಯುದ್ಧದಿಂದ ಮತ್ತು ದಾಳಿಗಳಿಂದ ತತ್ತರಿಸಿರುವ ಜನರಿಗೆ ಮಾನವೀಯ ಸಹಾಯವನ್ನು ಒದಗಿಸುತ್ತಿರುವ ಮೂರು ದತ್ತಿ ಸಂಸ್ಥೆಗಳಿಗೆ 2.5 ಕೋ. ರೂ. ದೇಣಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದ್ದಾರೆ.
X ವೀಡಿಯೊ ಸಂದೇಶದಲ್ಲಿ, ಯೂಸುಫ್ ಝಾಯಿ “ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ. ಅದನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
“ನಾನು ಇಸ್ರೇಲ್, ಫೆಲಸ್ತೀನ್ ಮತ್ತು ಪ್ರಪಂಚದಾದ್ಯಂತ ಶಾಂತಿ ಬಯಸುತ್ತಿರುವವರೊಡನೆ ನನ್ನ ಧ್ವನಿಗೂಡಿಸುತ್ತಿದ್ದೇನೆ. ಸಾಮೂಹಿಕ ಶಿಕ್ಷೆಯು ಯಾವಾಗಲೂ ಉತ್ತರವಲ್ಲ. ಗಾಝಾದ ಅರ್ಧದಷ್ಟು ಜನಸಂಖ್ಯೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆ ಯುವ ಜನರಿಗೆ ತೊಂದರೆಯಾಗಬಾರದು. ಬಾಂಬ್ ದಾಳಿಯ ಮಧ್ಯೆ ಸರಿಯಾದ ಉದ್ಯೋಗವಿಲ್ಲದೇ ಅವರು ಜೀವನ ನಡೆಸಬಾರದು” ಎಂದಿದ್ದಾರೆ.
ಗಾಝಾಕ್ಕೆ ಮಾನವೀಯ ನೆರವು ನೀಡಲು ಅವಕಾಶ ನೀಡಬೇಕು ಮತ್ತು ಕದನ ವಿರಾಮಕ್ಕೆ ಕರೆ ನೀಡಬೇಕು ಎಂದು ಇಸ್ರೇಲಿ ಸರ್ಕಾರವನ್ನು ಮಲಾಲ ಒತ್ತಾಯಿಸಿದ್ದಾರೆ. ತಕ್ಷಣ ಕದನ ವಿರಾಮ ಘೋಷಿಸಿ, ಶಾಶ್ವತ ಶಾಂತಿಗಾಗಿ ಶ್ರಮಿಸಬೇಕು ಎಂದು ಸರ್ಕಾರಗಳಿಗೆ ಕರೆ ನೀಡಿದ್ದಾರೆ.