Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಿಎಂ ಹುದ್ದೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್‌

ಬೆಳಗಾವಿ : ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿಯ ಸಕ್ಯೂಟ್ ಹೌಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಕಕ್ಕೆ ಜನ ಐದು ವರ್ಷ ಆಡಳಿತ ನಡೆಸಲು ಆಶೀರ್ವಾದ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಬಹಷ್ಟು ಜನರಿಗೆ ಬಯಕೆಗಳಿರುತ್ತವೆ. ಅವರ ಆಸೆ, ವಿಚಾರಗಳು ಇರುತ್ತವೆ. ಆದರೆ ನಮ್ಮ ಆದ್ಯತೆ ಉತ್ತಮ ಆಡಳಿತ ನೀಡುವತ್ತ ಇದೆ. ಅಧಿಕಾರದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ, ಆ ಬಗ್ಗೆ ತಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಈ ವರ್ಷ ಮಳೆಯ ಕೊರತೆಯಾಗಿದೆ. ಒಂದು ದಿನದ ಮಳೆ ಕೊರತೆಯಿಂದ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ. ಈ ವರ್ಷ 60-70 ದಿನಗಳು ಮಾತ್ರ ಮಳೆಯಾಗಿದೆ. ವಿದ್ಯುತ್ ಅನ್ನು 6ರಿಂದ 7 ರೂಪಾಯಿವರೆಗೂ ಖರೀದಿ ಮಾಡಿ, ರೈತರಿಗೆ ವಿನಾಯಿತಿ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ರೈತರು ಬಳಸಿದ ವಿದ್ಯುತ್‍ಗೆ ಸರ್ಕಾರವೇ ಶುಲ್ಕ ಭರಿಸುತ್ತಿದೆ ಎಂದರು.

ಹಿಂದೆ ನಾವು ಅಧಿಕಾರದಲ್ಲಿದ್ದಾಗ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು. ಹಾಗಾಗಿ ಸಮಸ್ಯೆ ಶುರುವಾಗಿದೆ. ನಾವು ಹಿಂದಿನ ಸರ್ಕಾರವನ್ನು ಟೀಕಿಸುತ್ತಾ ಕುಳಿತುಕೊಳ್ಳುವುದಿಲ್ಲ. ಸರ್ಕಾರ ರಚನೆಯಾದ ದಿನದಿಂದಲೇ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಜೊತೆ ಪಾವಗಡದ ಸೌರಶಕ್ತಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹೊಸದಾಗಿ ವಿದ್ಯುತ್ ಉತ್ಪಾದನೆ ಕುರಿತು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ರೈತರಿಗೆ ಆರು ಗಂಟೆ ವಿದ್ಯುತ್ ನೀಡುತ್ತಿದ್ದೇವೆ, ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಏಳು ಗಂಟೆ ಸಬರಾಜು ಮಾಡಲಾಗುತ್ತಿತ್ತು. ಪ್ರಸ್ತುತ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಗೆ ವ್ಯತ್ಯಾಸವಾಗಿದೆ ಎಂದರು. ನೀರಾವರಿ ಪ್ರದೇಶದಲ್ಲಿ ಕೊನೆಭಾಗಕ್ಕೂ ನೀರು ತಲುಪಿಸಲು ಜಾಗೃತಿ ಮೂಡಿಸಬೇಕಿದೆ. ಕೆಲವು ಭಾಗಗಳಲ್ಲಿ ಪೈಪ್ ಹಾಕಿಕೊಂಡು 10-20 ಕಿಲೋಮೀಟರ್ ವರೆಗೂ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರವಾಗುತ್ತಿದೆ ಎಂದರು.

ತಾವು ನಿನ್ನೆ ನೀರಾವರಿ ಬಳಕೆದಾರರ ಸಂಘಗಳ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅವುಗಳನ್ನು ಮತ್ತೆ ಸಕ್ರಿಯಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದರು. ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರಮ ಕೋಲಾರದವರೆಗೂ ನೀರು ಹರಿಸಬೇಕಿದೆ. ಮಧ್ಯದಲ್ಲಿ ಪಂಪ್‍ಸೆಟ್ ಹಾಕಿಕೊಂಡು ನೀರು ಎಳೆದುಕೊಂಡರೆ ಕೊನೆಭಾಗಕ್ಕೆ ನೀರು ಹೋಗುವುದಿಲ್ಲ. ಅದಕ್ಕಾಗಿ ಕಾಲುವೆ ಮಧ್ಯದಲ್ಲಿ ನೀರು ತೆಗೆಯದಂತೆ ತಡೆಯಲು ವಿಶೇಷ ಕಾನೂನು ರೂಪಿಸಲಾಗುವುದು ಎಂದರು.

ನೀರು ಬಳಕೆದಾರರ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳು, ರೈತರಿಗೆ, ಇಂಜಿನಿಯರ್‍ಗಳಿಗೆ ಧಾರವಾಡದ ವಾಲ್ಮಿ ಸಂಸ್ಥೆಯಿಂದ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಬೆಳಗಾವಿಯಲ್ಲಿ ಉತ್ತಮ, ರೈತ ಪರ ಕಾಳಜಿ, ಬದ್ಧತೆ ಇರುವ ಅಧಿಕಾರಿಗಳಿದ್ದಾರೆ. ಏನು ಸಮಸ್ಯೆ ಇಲ್ಲ ಎಂದರು.

ಕಾಲುವೆ ಮಧ್ಯದಲ್ಲಿ ನೀರು ಪಂಪ್ ಮಾಡುವುದಕ್ಕೆ ಶುಲ್ಕ ನಿಗದಿ ಮಾಡುವ ಪದ್ಧತಿಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿದೆ. ಅದನ್ನೂ ಅಧ್ಯಯನ ನಡೆಸಲಾಗುತ್ತಿದೆ. ನೀರಾವರಿ ಯೋಜನೆಗೆ ಬಳಕೆ ಮಾಡುವ ವಿದ್ಯುತ್‍ಗೆ ಸಾವಿರಾರು ಕೋಟಿ ರೂಪಾಯಿ ಶುಲ್ಕ ಪಾವತಿಸಬೇಕಿದೆ. ಪಂಪಿಂಗ್ ಮೂಲಕ ನೀರು ತುಂಬಿಸುವ ಕೆರೆಗಳಲ್ಲಿ ಮೀನು ಸಾಗಾಣಿಕೆ ಮಾಡುವಂತೆ ಸಂಬಂಧ ಪಟ್ಟ ಸಚಿವರಿಗೆ ಸೂಚಿಸಿದ್ದೇನೆ. ಮೀನು ಸಾಗಾಣಿಕೆಯಿಂದ ಬರುವ ಆದಾಯವನ್ನು ಸರ್ಕಾರಕ್ಕೆ ಪಾವತಿಸಬೇಕು, ಅದರಿಂದ ವಿದ್ಯುತ್ ಶುಲ್ಕ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬೆಳಗಾವಿ ಜಿಲ್ಲೆಯೊಂದರಲ್ಲೇ ಎರಡು ಸಾವಿರ ಕೋಟಿ ರೂಪಾಯಿ ವಿದ್ಯುತ್ ಶುಲ್ಕ ಬಾಕಿ ಇದೆ. ಇದು ಪಾವತಿಯಾಗದಿದ್ದರೆ ಕಷ್ಟವಾಗುತ್ತದೆ. ಏಳು ರೂಪಾಯಿಗೆ ವಿದ್ಯುತ್ ಖರೀದಿಸಿ, ಎರಡು-ಮೂರು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ನಷ್ಟವನ್ನು ಭರಿಸಲು ಮೀನುಗಾರಿಕೆ ಆದಾಯವನ್ನು ಆಶ್ರಯಿಸಲಾಗುವುದು. ಮಹಾರಾಷ್ಟ್ರ ಮಾದರಿಯನ್ನು ಅಧ್ಯಯನ ನಡೆಸಲಾಗುತ್ತಿದೆ, ವರದಿ ನೀಡಲು ಸೂಚಿಸಿದ್ದೇನೆ. ಒಳ್ಳೆಯ ಅಭ್ಯಾಸಗಳನ್ನು ಜಾರಿಗೆ ತರುವುದರಲ್ಲಿ ತಪ್ಪೇನು ಎಂದರು.

ತ್ತೂರು ಕರ್ನಾಟಕ ಭಾಗದ ಅದೃಷ್ಟ ಚೆನ್ನಾಗಿದೆ. ಮಲ್ಲಪ್ರಭಾ ಹೊರತು ಪಡಿಸಿ ಉಳಿದ ಎಲ್ಲಾ ಅಣೆಕಟ್ಟೆಗಳು, ಕೆರೆ-ಕುಂಟೆಗಳು ತುಂಬಿವೆ. ಮಳೆ ಇರಲಿ, ಇಲ್ಲದಿರಲಿ ಈಭಾಗದಲ್ಲಿ ಸಮಸ್ಯೆಗಳಿಲ್ಲ. ಹಳೆ ಮೈಸೂರು ಭಾಗವನ್ನೂ ದೇವರೆ ಕಾಪಾಡಬೇಕು ಎಂದರು.

ಮಹಾರಾಷ್ಟ್ರ ಚಂದಗಡದಲ್ಲಿ ಕಚೇರಿ ತೆರೆದು ಗಡಿ ಭಾಗದ ಮರಾಠಿಗರಿಗೆ ಆರೋಗ್ಯ ಯೋಜನೆ ಜಾರಿಗೆ ತರಲು ನೆರೆಯ ಸರ್ಕಾರ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸೂಕ್ಷ್ಮ ವಿಚಾರ. ವೈಯಕ್ತಿಕವಾಗಿ ಪ್ರತಿಕ್ರಿಯಿಸುವುದಿಲ್ಲ. ಅನಗತ್ಯ ವಿವಾದಗಳು ಸೃಷ್ಟಿಯಾಗಬಾರದು. ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದರು.

ತಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿರುವ ಪ್ರಕರಣದ ವಿಚಾರಣೆಯಲ್ಲಿ ಏನಾಗಿದೆ ಎಂದು ತಮಗೆ ಗೋತ್ತಿಲ್ಲ. ಎಫ್‍ಐಆರ್ ಹಾಕಿದ್ದು ಸರಿಯಿಲ್ಲ, ತನಿಖೆ ಮಾಡಬಾರದು. ಎಫ್‍ಐಆರ್‍ನಲ್ಲಿ ಲೋಪಗಳಿವೆ ಎಂದು ನಮ್ಮ ವಕೀಲರು ಅರ್ಜಿ ಹಾಕಿದ್ದರು. ಅದೇನಾಗಿಯೇ ಮಾಹಿತಿ ಇಲ್ಲ ಎಂದರು.

ಹೊಸೂರಿನಿಂದ ಬೆಂಗಳೂರಿನ ಬೊಮ್ಮಸಂದ್ರದವರೆಗೂ ಮೇಟ್ರೋ ಯೋಜನೆ ಅನುಷ್ಠಾನಗೊಳಿಸಲು ತಮಿಳುನಾಡು ಸರ್ಕಾರ ಟೆಂಡರ್ ಕರೆದಿಲ್ಲ. ಎರಡು ರಾಜ್ಯಗಳ ನಡುವಿನ ಗಡಿಭಾಗದಲ್ಲಿ ಹೆಚ್ಚು ಬೆಳವಣಿಗೆಗಳಾಗಿವೆ. ನಾನೇ ಬಿಬಿಎಂಪಿ ಸಚಿವನಿದ್ದೇನೆ, ಟೆಂಡರ್ ಕರೆದಿಲ್ಲ. ಆದರೆ ಮೇಟ್ರೋ ಯೋಜನೆಗೆ ಕಾರ್ಯಸಾಧುತ್ವದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕರ್ನಾಟಕದ ಜನ, ಹೂಸೂರಿಗೆ ಹೋಗಿ, ಅಲ್ಲಿನವರು ಇಲ್ಲಿಗೆ ಬಂದು ಕೆಲ ಮಾಡುತ್ತಾರೆ. ಜನರಿಗೆ ಅನುಕೂಲವಾಗುವಂತೆ ಮೆಟ್ರೋ ಯೋಜನೆ ಜಾರಿಗೊಳಿಸಲು ತಮಿಳುನಾಡು ಸರ್ಕಾರ ಮನವಿ ಮಾಡಿತ್ತು. ಯೋಜನೆ ಜಾರಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಮೇಟ್ರೋ ಯೋಜನೆಗೆ ಶೇ.50ರಷ್ಟು ಅನುದಾನ ನೀಡುತ್ತಿದೆ ಎಂದ ಅವರು, ಮಹಾರಾಷ್ಟ್ರದ ಬಸ್‍ಗಳು ಕರ್ನಾಟಕಕ್ಕೆ ಬರಬಾರದು ಎಂದು ಹೇಳಲು ಸಾಧ್ಯವೇ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರೈಲು ಸಂಪರ್ಕಗಳಿಲ್ಲವೇ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಸರ್ಕಾರ ಕುಡಿಯುವ ನೀರು ಪೂರೈಸಲು ದೂದ್‍ಗಂಗಾ ನದಿ ತಿರುವ ಯೋಜನೆ ಕೈಗೆತ್ತಿಕೊಂಡಿದು ಗೋತ್ತಿಲ್ಲ. ಬೆಳಗಾವಿ ಭಾಗಕ್ಕೆ ನೀರೆ ಬರುತ್ತಿಲ್ಲ ಎಂಬ ವರದಿಯ ಬಗ್ಗೆ ತಂತ್ರಜ್ಞರ ಜೊತೆ ಚರ್ಚೆ ಮಾಡಿ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ