Mysore
27
haze

Social Media

ಗುರುವಾರ, 01 ಜನವರಿ 2026
Light
Dark

ಮತ್ತೆ ನರ್ತಿಸುತ್ತಿದೆ ಬೃಂದಾವನದ ಕಾರಂಜಿ

ಮಂಡ್ಯ : ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನದಲ್ಲಿರುವ ನವೀಕೃತ ಸಂಗೀತ ಕಾರಂಜಿ ಕೊನೆಗೂ ಉದ್ಘಾಟನೆ ಭಾಗ್ಯ ಕಂಡಿದೆ.

ಅಂದಾಜು ೨.೬೦ ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಣಗೊಂಡಿರುವ ನೂತನ ಸಂಗೀತ ಕಾರಂಜಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಭಾನುವಾರ ಚಾಲನೆ ನೀಡಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದ ಕೆಆರ್‌ಎಸ್‌ನ ಸಂಗೀತ ಕಾರಂಜಿ ತನ್ನ ನರ್ತನವನ್ನು ನಿಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತ ಸಂಗೀತ ಕಾರಂಜಿಯನ್ನು ಹೊಸದಾಗಿಯೇ ನಿರ್ಮಿಸಿದೆ. ಮುಂಬೈ ಮೂಲದ ಗ್ರೀನ್ ಕೇರ್ ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ನೂತನ ಸಂಗೀತ ಕಾರಂಜಿ ನಿರ್ಮಾಣದ ಪಡೆದು ವಾರಗಳ ಹಿಂದೆಯೇ ನವೀಕರಣ ಕಾಮಗಾರಿ ಮುಗಿಸಿತ್ತು. ಆದರೆ ಉದ್ಘಾಟನೆ ಕಾರ‍್ಯಕ್ರಮ ಹಮ್ಮಿಕೊಳ್ಳಬೇಕೆಂಬ ದೃಷ್ಟಿಯಿಂದ ಹೊಸ ಸಂಗೀತ ಕಾರಂಜಿಯನ್ನು ಪ್ರವಾಸಿಗರಿಗೆ ತೆರೆದಿರಲಿಲ್ಲ.

ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಕಾರಂಜಿಯ ಉದ್ಘಾಟನೆ ನೆರವೇರಿಸಿದ್ದಾರೆ. ಈ ಮೂಲಕ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಮನಸ್ಸಿಗೆ ಮುದ ನೀಡಲು ಅನುವು ಮಾಡಿಕೊಟ್ಟಿದ್ದಾರೆ. ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉದ್ಯಾನದ ವಿವಿಧ ಕಾರಂಜಿಗಳಲ್ಲಿ ಸಂಗೀತ ಕಾರಂಜಿ ಪ್ರಮುಖ ಆಕರ್ಷಣೆಯಾಗಿದೆ.

ಯುವರತ್ನ ಚಿತ್ರದ ‘ಫೀಲ್ ದಿ ಪವರ್’ 
ದೇಶದ ಮೊದಲ ಹೈಟೆಕ್ ಸಂಗೀತ ಕಾರಂಜಿ ಇದಾಗಿದ್ದು ಅತ್ಯಾಧುನಿಕ ಟು-ಡೈಮನ್‌ಷನ್ (೨ಡಿ) ನಾಜಿಲ್ ಅನ್ನು ಅಳವಡಿಸಲಾಗಿದೆ. ನೂತನ ಕಾರಂಜಿಯಲ್ಲಿ ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಲಾಗಿದೆ. ಜತೆಗೆ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಹಾಡುಗಳನ್ನು ಅಳವಡಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ‘ಯುವರತ್ನ’ ಚಿತ್ರದ ‘ಫೀಲ್ ದಿ ಪವರ್’, ವಿಷ್ಣುವರ್ಧನ್ ಅವರ ‘ಜೀವನದಿ’ ಚಿತ್ರದ ‘ಕನ್ನಡ ನಾಡಿನ ಜೀವನದಿ ಕಾವೇರಿ’ಹಾಗೂ ದೇಶ ಭಕ್ತಿಗೀತೆ ‘ಸಾರೆ ಜಹಾಸೆ ಅಚ್ಚ..’ ಮುಂತಾದ ಹಾಡುಗಳು ಜನಮನ ಗೆಲ್ಲಲಿದೆ.

ಪ್ರತೀ ದಿನ ಸಂಜೆ ೭ ರಿಂದ ೮ಗಂಟೆವರೆಗೆ ಕಾರಂಜಿ ಕಾರ್ಯಕ್ರಮ ನಡೆಯಲಿದ್ದು, ವಾರಾಂತ್ಯದಲ್ಲಿ ೯ ಗಂಟೆ ವರೆಗೆ ನಡೆಯಲಿದೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಎಇಇ -ರುಕ್ ಅಹಮದ್ ಅಬು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!