ಹಾಸನ : ಗರ್ಭಿಣಿಯ ಸಾವಿಗೆ ವೈದ್ಯರನಿರ್ಲಕ್ಷ್ಯವೇ ಕಾರಣ ಎಂಬುದು ಸಾಬೀತಾದ ಹಿನ್ನೆಲೆ ಸಕಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಹಾಸನದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ.
ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹಾಗೂ ಹೆಚ್‌ಎಂ ಮೋಹನ್‌ಕುಮಾರ್ ಅವರ ಪತ್ನಿ ವಿಎಂ ಆಶಾ 2021ರ ಮಾರ್ಚ್ 26ರಂದು ಬೆಳಗ್ಗೆ 11 ಗಂಟೆ ವೇಳೆಗೆ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ಪೂರ್ವ ತಪಾಸಣೆಗಾಗಿ ಬಂದಿದ್ದರು. ಬೆಳಗ್ಗೆ ಬಂದಿದ್ದ ಆಶಾ ಅವರನ್ನು ಡಾ. ಪುರುಷೋತ್ತಮ್ ಸಂಜೆ 4 ಗಂಟೆ ವೇಳೆಗೆ ಬನ್ನಿ ಎಂದು ತಿಳಿಸಿದ್ದರು. 4 ಗಂಟೆಗೆ ಬಂದಾಗ ಆಶಾ ಅವರನ್ನು ಪರೀಕ್ಷಿಸಲಾಗಿದ್ದು, ಸ್ಕ್ಯಾನ್ ವರದಿಯನ್ವಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ಪುರುಷೋತ್ತಮ್ ತಿಳಿಸಿದ್ದರು.
ಇದಕ್ಕೂ ಮೊದಲು ಆಶಾ ಪತಿ ಮೋಹನ್‌ಕುಮಾರ್ ಪತ್ನಿಗೆ ಶಸ್ತ್ರ ಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ ಮೋಹನ್‌ಕುಮಾರ್ ಮನವಿ ತಿರಸ್ಕರಿಸಿ, ಶಸ್ತ್ರಚಿಕಿತ್ಸೆಯನ್ನು ಮಾಡದೇ ಪುರುಷೋತ್ತಮ್ ಕೇವಲ ಇಂಜೆಕ್ಷನ್ ನೀಡಿದ್ದರು. ಅದೇ ದಿನ ರಾತ್ರಿ ಆಶಾ ತೀವ್ರ ಹೊಟ್ಟೆನೋವಿನಿಂದ ನರಳಾಡಿ ಕೋಮಾ ಸ್ಥಿತಿಗೆ ಹೋಗಿದ್ದರು.
ಮರುದಿನ ಬೆಳಗ್ಗೆ ಆಶಾ ಅವರನ್ನು ಪುರುಷೋತ್ತಮ್ ಬಂದು ಪರೀಕ್ಷಿಸಿದ್ದು, ಆಕೆಯ ಆರೋಗ್ಯದ ಗಂಭೀರತೆ ಅರಿತು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಬಳಿಕ ಅಲ್ಲಿ ಆಶಾಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಮಾಚ್ 29 ರಂದು ಹೆಚ್ಚಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಪತ್ನಿ ಆಶಾ ಸಾವಿಗೆ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪುರುಷೋತ್ತಮ್ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಮೋಹನ್‌ಕುಮಾರ್ ಆರೋಪಿಸಿ, ಪರಿಹಾರಕ್ಕಾಗಿ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸಿ.ಎಂ. ಚಂಚಲ, ಸದಸ್ಯ ಹೆಚ್.ವಿ ಮಹಾದೇವ ಹಾಗೂ ಮಹಿಳಾ ಸದಸ್ಯೆ ಆರ್ ಅನುಪಮ ಒಳಗೊಂಡ ಪೀಠ ಡಾ.ಪುರುಷೋತ್ತಮ್ ಅವರ ವೈದ್ಯಕೀಯ ನಿರ್ಲಕ್ಷ್ಯದಿಂದ ಆಶಾ ಸಾವು ಸಾಬೀತಾಗಿದೆ ಎಂದು ತಿಳಿಸಿದೆ. ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷೆ ಸಿ.ಎಂ ಚಂಚಲ ತೀರ್ಪು ಪ್ರಕಟಿಸಿದ್ದಾರೆ.