Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎಚ್‌ಎಎಲ್‌ನಿಂದ ವಾಯುಪಡೆಗೆ ಮೊದಲ ತರಬೇತಿ ಯುದ್ಧ ವಿಮಾನ ಹಸ್ತಾಂತರ

ನವದೆಹಲಿ : ದೇಶದ ಹೆಮ್ಮೆಯ ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ತಾನು ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ ತೇಜಸ್‌ ಅನ್ನು ವಾಯುಪಡೆಗೆ ಬುಧವಾರ ಹಸ್ತಾಂತರಿಸಿದೆ. ಇದು ತರಬೇತಿ ವಿಮಾನವಾಗಿದ್ದು, ಸ್ವದೇಶಿ ನಿರ್ಮಿತ ಈ ಅತ್ಯಾಧುನಿಕ ತೇಜಸ್‌ ತರಬೇತಿ ವಿಮಾನವು ಯುದ್ಧ ವಿಮಾನಗಳೊಂದಿಗೆ ವಾಯುಪಡೆಯ ಬಲ ವೃದ್ಧಿಸಲಿದೆ.

ಇಬ್ಬರು ಕುಳಿತುಕೊಳ್ಳಬಹುದಾದ 18 ಎಲ್‌ಸಿಎ ತೇಜಸ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಪೂರೈಸುವ ಸಂಬಂಧ ಈ ಹಿಂದೆಯೇ ಒಪ್ಪಂದ ಏರ್ಪಟ್ಟಿದೆ. ಅದರ ಅನುಸಾರ ಬುಧವಾರ ಮೊದಲ ಎಲ್‌ಸಿಎ ತೇಜಸ್‌ ಯುದ್ಧ ವಿಮಾನವನು ಎಚ್‌ಎಎಲ್‌, ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.

ಹಸ್ತಾಂತರ ಕಾರ್ಯಕ್ರಮದಲ್ಲಿ ರಕ್ಷಣಾ ಖಾತೆಯ ಸಹಾಯಕ ಸಚಿವ ಅಜಯ್‌ ಭಟ್‌ ಹಾಗೂ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಹಾಗೂ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮುಖ್ಯಸ್ಥರು ಹಾಜರಿದ್ದರು.

2023 – 24ನೇ ಸಾಲಿನಲ್ಲಿ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ 8 ಎಲ್‌ಸಿಎ ತೇಜಸ್‌ ವಿಮಾನಗಳನ್ನು ವಾಯುಪಡೆಗೆ ಪೂರೈಸಲಿದೆ. 2026 – 27ನೇ ಸಾಲಿನಲ್ಲಿ ಉಳಿದ 10 ಯುದ್ಧ ವಿಮಾನಗಳನ್ನು ಎಚ್‌ಎಎಲ್‌ ಪೂರೈಸಲಿದೆ.

ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ. ಅತ್ಯಾಧುನಿಕ ಯುದ್ಧ ವಿಮಾನದ ಮೂಲಕ ಭಾರತೀಯ ವಾಯುಪಡೆಯ ಪೈಲಟ್‌ಗಳಿಗೆ ತರಬೇತಿ ನೀಡಲು ಇದರಿಂದ ಅನುಕೂಲವಾಗಲಿದೆ. ವ್ಯೂಹಾತ್ಮಕ ತಂತ್ರಗಾರಿಕೆ ರೂಪಿಸುವಲ್ಲಿ ಈ ಯುದ್ಧ ವಿಮಾನಗಳು ಮಹತ್ವದ ಪಾತ್ರ ವಹಿಸಲಿವೆ, ಎಂದು ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಹೇಳಿದೆ.

ಬಲಿಷ್ಠ ಎಂಜಿನ್‌, ಅತ್ಯಾಧುನಿಕ ಗ್ಲಾಸ್‌ ಕಾಕ್‌ಪಿಟ್‌, ಇಂಟಿಗ್ರೇಟೆಡ್‌ ಡಿಜಿಟಲ್‌ ಏವಿಯಾನಿಕ್ಸ್‌ ಸಿಸ್ಟಮ್ಸ್‌ ಮತ್ತು ಅಡ್ವಾನ್ಸ್ಡ್‌ ಫ್ಲೈಟ್‌ ಕಂಟ್ರೋಲ್‌ ಸಿಸ್ಟಮ್ಸ್‌ ಸೇರಿದಂತೆ ಅನೇಕ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಈ ಎಲ್‌ಸಿಎ ತೇಜಸ್‌ ಯುದ್ಧ ವಿಮಾನಗಳು ಹೊಂದಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ