Mysore
27
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಸಿಕ್ಕಿಂನಲ್ಲಿ ಮೇಘಸ್ಫೋಟ : ಪ್ರವಾಹದಲ್ಲಿ 23 ಸೈನಿಕರು ನಾಪತ್ತೆ

ಗ್ಯಾಂಗ್ಟಾಕ್ : ಸಿಕ್ಕಿಂನ ಲೊನಾಕ್ ಸರೋವರದಲ್ಲಿ ಮೇಘಸ್ಫೋಟ ಉಂಟಾಗಿದ್ದು, ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ 23 ಸೈನಿಕರು ನಾಪತ್ತೆಯಾಗಿದ್ದಾರೆ.

ಚುಂಗ್ಥಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ನೀರಿನ ಮಟ್ಟ ಹಠಾತ್ತನೆ 15-20 ಅಡಿಗಳಷ್ಟು ಎತ್ತರಕ್ಕೆ ಏರಿದೆ. ಇದರಿಂದ ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಈ ಹಿನ್ನೆಲೆ 23 ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆ. ಇನ್ನೂ ಕೆಲವು ವಾಹನಗಳು ಮುಳುಗಿವೆ ಎಂದು ವರದಿಯಾಗಿದೆ.

ಹಠಾತ್ ಪ್ರವಾಹದಿಂದ ಲಾಚೆನ್ ಕಣಿವೆಯ ಉದ್ದಕ್ಕೂ ಹಲವಾರು ಸೇನಾ ಸಂಸ್ಥೆಗಳಿಗೆ ಹಾನಿಯಾಗಿದೆ. ಇದೀಗ ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ.

ನದಿ ಉಕ್ಕಿ ಹರಿಯುತ್ತಿರುವುದರಿಂದ ತೀಸ್ತಾ ನದಿಯ ಮೇಲಿನ ಸಿಂಗ್‌ತಮ್ ಕಾಲು ಸೇತುವೆ ಕುಸಿದಿದೆ. ಪಶ್ಚಿಮ ಬಂಗಾಳದಿಂದ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 10ರ ಹಲವು ಭಾಗಗಳು ಕೊಚ್ಚಿ ಹೋಗಿವೆ. ಭಾರೀ ಪ್ರವಾಹದ ಹಿನ್ನೆಲೆ ಅನೇಕ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಿಕ್ಕಿಂ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ತೀಸ್ತಾ ನದಿಯಿಂದ ಜನರನ್ನು ದೂರ ತೆರಳುವಂತೆ ಕೇಳಿಕೊಂಡಿದೆ. ಪಶ್ಚಿಮ ಬಂಗಾಳದ ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಜಲಾನಯನ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!