ಬೆಂಗಳೂರು : ಮೊನ್ನೆಯಷ್ಟೇ ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ನಲ್ಲಿ ಭಾಗಿಯಾಗಿದ್ದ ನಟ ನೆನಪಿರಲಿ ಪ್ರೇಮ್ ,ಇಂದು ಪತ್ರ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕರೆಕೊಟ್ಟಿದ್ದ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯಿರಿ ಚಳವಳಿಯಲ್ಲಿ ಭಾಗಿಯಾಗಿ, ತಮ್ಮ ರಕ್ತದಲ್ಲಿ ಪ್ರಧಾನಿಗೆ ನಟ ಪ್ರೇಮ್ ಪತ್ರ ಬರೆದಿದ್ದಾರೆ.
ಕನ್ನಡ ನೆಲ-ಜಲ ವಿಷಯದಲ್ಲಿ ಹೋರಾಡಲು ಪ್ರೇಮ್ ಯಾವತ್ತಿಗೂ ಮುಂದು. ಅನೇಕ ಹೋರಾಟಗಳಲ್ಲೂ ಅವರು ಭಾಗಿಯಾಗಿದ್ದಾರೆ. ಇದೀಗ ರಕ್ತದಲ್ಲಿ ಪತ್ರ ಬರೆದು, ಆ ಪತ್ರವನ್ನು ಪ್ರಧಾನಿ ಕಳುಹಿಸಿದ್ದಾರೆ. ಕಾವೇರಿ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ, ನಮ್ಮ ನೆಲದ ರೈತರಿಗೆ ನ್ಯಾಯ ದೊರಕಿಸಿ ಎಂದು ಪತ್ರದಲ್ಲಿ ಅವರು ಬರೆದಿದ್ದಾರೆ.
ಪತ್ರ ಬರೆಯುತ್ತಿರುವ ವಿಡಿಯೋವನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಕಾಮೆಂಟ್ಸ್ ಅಲ್ಲಿ ನೋಡಬಹುದಾಗಿದೆ. ಕೆಲವರು ಭಾವನಾತ್ಮಕವಾಗಿ ಸ್ಪಂದಿಸಿದರೆ, ಇನ್ನೂ ಕೆಲವರು ಕಾನೂನಿನ ಪಾಠವನ್ನೂ ಮಾಡಿದ್ದಾರೆ.
ಕರವೇ (ನಾರಾಯಣ ಗೌಡ ಬಣ) ಇಂದು ರಕ್ತದಲ್ಲಿ ಬರೆದ ಒಂದು ಲಕ್ಷ ಪತ್ರವನ್ನು ಪ್ರಧಾನಿಗೆ ಬರೆಯುವಂತೆ ಕರೆಕೊಟ್ಟಿತ್ತು. ನಟಿ ಅಶ್ವಿನಿ ಗೌಡ ಸೇರಿದಂತೆ ಹಲವರು ಈ ಪತ್ರ ಚಳಿವಳಿಯಲ್ಲಿ ಭಾಗಿಯಾಗಿದ್ದಾರೆ.





