Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

‌ವಂಚನೆ ಆರೋಪ : ಸಿಸಿಬಿ ಪೊಲೀಸರ ಅತಿಥಿಯಾದ ಚೈತ್ರಾ ಕುಂದಾಪುರ

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಸುಮಾರು 7 ಕೋಟಿ ರೂ. ವಂಚಿಸಿರುವ ಆರೋಪದಲ್ಲಿ ಈಗ ಚೈತ್ರಾ ಕುಂದಾಪುರ ಬೆಂಗಳೂರಿನ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದ್ದು, ಚೈತ್ರಾ ಕುಂದಾಪುರ ಸ್ವತಃ ತಾವೇ ಮೂವರು ಕೇಂದ್ರ ಬಿಜೆಪಿ ನಾಯಕರನ್ನು ಸೃಷ್ಟಿಸಿ ಉದ್ಯಮಿಯನ್ನು ನಂಬಿಸಿರುವುದು ಬಯಲಾಗಿದೆ.

ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್ ಎಸ್ ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವ್ಯವಸ್ಥಿತ ಪ್ಲಾನ್‌ ಮಾಡಿದ್ದ ಚೈತ್ರಾ ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ. ಸಲೂನ್ ಕೆಲಸಗಾರರು, ಕಬಾಬ್ ಮಾರುವವರನ್ನೇ ಬಿಜೆಪಿಯ ಕೇಂದ್ರದ ನಾಯಕರು ಎಂದು ಉದ್ಯಮಿಗೆ ನಂಬಿಸಿದ್ದರು ಎಂದು ಹೇಳಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್‌ ಒಂದರಲ್ಲಿ ಮೇಕಪ್‌ ಮಾಡುವ ರಮೇಶ್‌ ಹಾಗೂ ಧನರಾಜ್ ಎಂಬವರನ್ನು ಆರ್‌ಎಸ್‌ಎಸ್‌ ಪ್ರಚಾರಕರು ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಪರಿಚಯ ಮಾಡಿಸಲಾಗಿತ್ತು. ಅದಲ್ಲದೇ ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿ ಉದ್ಯಮಿಯನ್ನು ಮೋಸದ ಬಲೆಗೆ ಚೈತ್ರಾ ಕುಂದಾಪುರ ಸಿಲುಕಿಸಿದ್ದರು ಎಂದು ತಿಳಿದುಬಂದಿದೆ.

ನಕಲಿ ಪಾತ್ರದಾರಿಗಳಿಗೆ ಕಡೂರಿನ ಮನೆಯೊಂದರಲ್ಲಿ ಚೈತ್ರಾ ಕುಂದಾಪುರ ತರಬೇತಿ ನೀಡಿದ್ದರು ಎನ್ನಲಾಗಿದೆ. ಕಬಾಬ್ ಮಾರುತ್ತಿದ್ದ ವ್ಯಕ್ತಿಗೆ ಚೈತ್ರಾ ಕುಂದಾಪುರ ಮತ್ತು ಗಗನ್ 93 ಸಾವಿರ ರೂಪಾಯಿಯನ್ನು ನೀಡಿದ್ದರು. ಇನ್ನು, ಈ ನಾಟಕ ಮಾಡಲು ಗಗನ್ ಮತ್ತು ಧನರಾಜ್ ತಲಾ 1.20 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ. ಜೊತೆಗೆ ಆರ್‌ ಎಸ್ಎಸ್ ಸಂಘಟನೆ ಹೆಸರಿನ ಕಾರ್‌ ಬಳಸಲು 2 ಲಕ್ಷ ರೂ. ಅನ್ನು ಸಹ ನೀಡಲಾಗಿತ್ತು ಎಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ