Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಟ್ರಕ್‌ನಲ್ಲಿದ್ದ ಮಾಂಸ ತ್ಯಾಜ್ಯ ಗೋವಿನದ್ದಲ್ಲ: ಐಂದ್ರಿತಾ ರೇ ಆರೋಪಕ್ಕೆ ಡಿಸಿಪಿ ಸ್ಪಷ್ಟನೆ

ಬೆಂಗಳೂರು : ಹಸುವಿನ ಮಾಂಸ ತ್ಯಾಜ್ಯ ಸಾಗಿಸುತ್ತಿದ್ದ ಟ್ರಕ್‌ ಚಾಲಕನ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನಟಿ ಐಂದ್ರಿತಾ ರೇ ಆರೋಪಿಸಿದ್ದರು. ಕನ್ನಡದ ನಟಿಯ ಈ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿದ್ದು, ಪ್ರಾಣಿಗಳ ಮಾಂಸ ತ್ಯಾಜ್ಯ ಹಸುವಿನದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅದಲ್ಲದೇ ಪ್ರಾಣಿಗಳ ಮಾಂಸ ತ್ಯಾಜ್ಯ ಸಾಗಿಸುತ್ತಿದ್ದವರು ಬಿಬಿಎಂಪಿಯಿಂದ ಲೈಸೆನ್ಸ್‌ ಪಡೆದ ವ್ಯಾಪಾರಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು, ಪ್ರಾಣಿಗಳ ಮಾಂಸ ತ್ಯಾಜ್ಯ ಹಸುವಿನದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ವಾಹನದಲ್ಲಿ ಸಿಕ್ಕಿರುವ ಮೂಳೆಗಳು, ಕೊಂಬುಗಳು, ಚರ್ಮಗಳು ಮತ್ತು ಪ್ರಾಣಿಗಳ ಮಾಂಸ ತ್ಯಾಜ್ಯ ಹಸುಗಳದ್ದಲ್ಲ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಅದಲ್ಲದೇ, ಪ್ರಾಣಿಗಳ ಮಾಂಸ ತ್ಯಾಜ್ಯ ಸಾಗಾಟ ಮಾಡುತ್ತಿದ್ದ ವ್ಯಾಪಾರಿ ಬಿಬಿಎಂಪಿಯ ಪೂರ್ವ ಪಶು ಸಂಗೋಪನೆ ಇಲಾಖೆಯಿಂದ ಅನುಮತಿ ಪಡೆದಿದ್ದು, ಅಧಿಕೃತ ಕಸಾಯಿಖಾನೆಯಿಂದ ಮಾಂಸ ತ್ಯಾಜ್ಯ ಸಾಗಾಟ ಮಾಡಲಾಗುತ್ತಿದೆ ಎಂದು ಡಿಸಿಪಿ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಡಿಸಿಪಿ ಸಿಕೆ ಬಾಬಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನಾಗರಿಕರೊಬ್ಬರು ಈ ರೀತಿ ಉಪದ್ರವ ಸೃಷ್ಟಿಸಲು ಪ್ರಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ನಟಿ ಐಂದ್ರಿತಾ ರೇ ಏನು ಹೇಳಿದ್ದರು?

ಐಂದ್ರಿತಾ ರೇ ಅವರು ಸೆಪ್ಟೆಂಬರ್‌ 6 ರಂದು ತಮ್ಮ ಎಕ್ಸ್‌ (ಹಿಂದಿನ ಟ್ವಿಟರ್‌) ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಾಣಿಗಳ ಮಾಂಸ ತ್ಯಾಜ್ಯ ತುಂಬಿಕೊಂಡಿರುವ ಟ್ರಕ್‌ ಇತ್ತು. ಶಂಕಿತ ಹಸುವಿನ ಮಾಂಸ ತ್ಯಾಜ್ಯವನ್ನು ಸಾಗಾಟ ಮಾಡಲಾಗುತ್ತಿದೆ. ಸದ್ಯ ಟ್ರಕ್‌ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿದೆ.

ಆದರೆ, ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಐಂದ್ರಿತಾ ರೇ ಆಗ್ನೇಯ ವಿಭಾಗದ ಡಿಸಿಪಿ, ಬೆಂಗಳೂರು ನಗರ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಟ್ಯಾಗ್‌ ಮಾಡಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮುಂದಾಗಿದ್ದ ನಟಿ ಮೋದಿ ಅವರನ್ನು ಕೂಡ ಟ್ಯಾಗ್‌ ಮಾಡಿ ರಾಜ್ಯದಲ್ಲಿ ಗೋಹತ್ಯೆ ಕಾನೂನು ಬಾಹಿರ ಎಂದು ಹೇಳಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ