ತುಮಕೂರು : ಹಿಂದೂ ಧರ್ಮದ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು,ನಾನು ಧರ್ಮಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮದ ಬಗ್ಗೆ ಹೇಳಿದ್ದೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ನಮಗಿರುವಷ್ಟು ಅಭಿಮಾನ ಅವರಿಗೆ ಇಲ್ಲ. ಕೇವಲ ತೋರಿಕೆ, ಪ್ರಚಾರಕ್ಕಾಗಿ ಮಾತ್ರ ಹಿಂದೂ ಎನ್ನುತ್ತಾರೆ. ನಮ್ಮ ಹೇಳಿಕೆಯಲ್ಲಿ ಯಾವುದೇ ವಿವಾದವಿಲ್ಲ, ತಪ್ಪು ಹೇಳಿಕೆ ನೀಡಿಲ್ಲ. ರಾಜಕೀಯ ಕಾರಣಕ್ಕೆ ವಿರೋಧಿಸಿದರೆ ಉತ್ತರ ನೀಡುತ್ತೇನೆ. ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕಾರ, ನಾನು ನೀಡಿರುವ ಹೇಳಿಕೆಯಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ಅವರು ರಾಜಕೀಯ ಕಾರಣಕ್ಕೆ ವಿವಾದ ಮಾಡಿದರೆ ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ. ಭಗವದ್ಗೀತೆ ಶ್ಲೋಕ ಯಾಕೆ ಹೇಳಿದೆ ನಾನು? ನನಗೆ ಹಿಂದೂ ಧರ್ಮದಲ್ಲಿ ಇರುವಷ್ಟು ನಂಬಿಕೆ, ನಾನು ಮಾಡುವಷ್ಟು ಆಚರಣೆ ಅವರಿಗಂತೂ ಇಲ್ಲ. ನನಗಿಂತ ಹೆಚ್ಚೇನೂ ಬಿಜೆಪಿಯವರು ಆಚರಣೆ ಮಾಡುವುದಿಲ್ಲ. ನಾನು ಕೇವಲ ಹೋಲಿಕೆ ಮಾಡಿ ಮಾತನಾಡಿದ್ದೇನೆ ಅಷ್ಟೇ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.