ಶ್ರೀರಂಗಪಟ್ಟಣ : ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕನ್ನಂಬಾಡಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ರೈತ ಸಂಘದ ರೈತ ಬಣದ ರೈತ ಮುಖಂಡರನ್ನು ಪೋಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.
ಸಂಸ್ಥಾಪಕ ರಾಜ್ಯಾದ್ಯಕ್ಷ ಇಂಗಲಕುಪ್ಪೆ ಇ.ಎನ್.ಕೃಷ್ಣೇಗೌಡ, ರಾಜ್ಯ ವರಿಷ್ಠ ಹೆಮ್ಮಿಗೆ ಚಂದ್ರಶೇಖರ್ ಹಾಗೂ ಜಿಲ್ಲಾಧ್ಯಕ್ಷ ಕಾಳೇನಹಳ್ಳಿ ರಮೇಶ್ ನೇತೃತ್ವದಲ್ಲಿ ಇನ್ನೂರಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರು ಖಾಲಿ ಕೊಡ ಹಿಡಿದು ತಾಲ್ಲೂಕಿನ ಕೆಆರ್ ಎಸ್ ಕನ್ನಂಬಾಡಿ ಅಣೆಕಟ್ಟೆ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಆಗ್ರಹಿಸಿದರು. ಬಳಿಕ ಕನ್ನಂಬಾಡಿ ಅಣೆಕಟ್ಡೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರುಗಳನ್ನು ಪೋಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.