ನವದೆಹಲಿ : ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದು, ಇದು ವಿಪಕ್ಷಗಳ ಒಕ್ಕೂಟ I N D I A ಹಿಂದೂ ಧರ್ಮವನ್ನು ದ್ವೇಷಿಸುತ್ತದೆ ಎಂದು ತೋರಿಸುತ್ತದೆ ಎಂದಿದ್ದಾರೆ. ಅಲ್ಲದೆ ಇದು ನಮ್ಮ ಪರಂಪರೆಗೆ ಮಾಡುವ ಅವಮಾನ ಎಂದು ಟೀಕಿಸಿದ್ದಾರೆ.
ರಾಜಸ್ಥಾನದ ಡುಂಗರ್‌ಪುರದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾ, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು I N D I A ಒಕ್ಕೂಟದ “ವೋಟ್ ಬ್ಯಾಂಕ್ ರಾಜಕೀಯ” ಮತ್ತು “ತುಷ್ಟೀಕರಣ” ತಂತ್ರದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಬರಹಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, “ಸನಾತನ ಧರ್ಮದ ಕಲ್ಪನೆಯು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ, ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದರು. ಅಲ್ಲದೆ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಅವರು ಹೋಲಿಸಿದ್ದಾರೆ.
ಈ ಹೇಳಿಕೆಗಳು ಟೀಕೆಗಳಿಗೆ ಒಳಗಾದಾಗ ಪ್ರತಿಕ್ರಿಯೆ ನೀಡಿದ ಉದಯನಿಧಿ ಸ್ಟಾಲಿನ್, “ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ನಾನು ಎಂದಿಗೂ ಕರೆ ನೀಡಲಿಲ್ಲ, ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯುತ್ತದೆ, ನಾನು ಮಾತನಾಡುವ ಪ್ರತಿಯೊಂದು ಮಾತಿಗೂ ನಾನು ದೃಢವಾಗಿ ನಿಲ್ಲುತ್ತೇನೆ. ನಾನು ಸನಾತನ ಧರ್ಮದಿಂದ ಬಳಲುತ್ತಿರುವ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವವರ ಪರವಾಗಿ ಮಾತನಾಡಿದ್ದೇನೆ’ ಎಂದಿದ್ದಾರೆ.





