ಶ್ರೀಹರಿಕೋಟಾ : ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 ಯಶಸ್ವಿಯಾಗಿದೆ. ಈ ಬೆನ್ನಲ್ಲೆ ಈಗ ನಮ್ಮ ಇಸ್ರೋ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಇದೀಗ ಶ್ರೀಹರಿಕೋಟಾದಲ್ಲಿ ಆದಿತ್ಯ ಎಲ್1 ಉಡಾವಣೆಯಾಗಿದೆ. ಈ ಮೂಲಕ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತ ಇಂದು ಸಾಕ್ಷಿಯಾಯಿತು.
ಇಸ್ರೋ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಮಿಷನ್ ಅನ್ನು ಇಂದು ಸರಿಯಾಗಿ ಬೆಳಗ್ಗೆ 11.50 ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆಯಾಗಿದೆ. ಈ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಹಾಜರಿದ್ದರು. ಜೊತೆಗೆ ಆದಿತ್ಯ ಎಲ್1 ಉಡಾವಣೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಕೂಡ ಸಾಕ್ಷಿಯಾದರು. ಇಷ್ಟು ಮಾತ್ರವಲ್ಲದೆ ಅಪಾರ ಸಂಖ್ಯೆಯಲ್ಲಿ ಜನಸಾಗರವೇ ನೆರೆದಿತ್ತು.
ಆರಂಭದಲ್ಲಿ ಸೂರ್ಯಯಾನ ಶುರುವಾಗಿದ್ದು, ಕೇವಲ ಸೂರ್ಯನ ಅನ್ನೋ ಹೆಸರಲ್ಲಿ ಮಾತ್ರ. ಆ ಬಳಿಕ ಕೆಲವು ಅಧ್ಯಯನದ ನಂತರ ಎಲ್ 1 ಕಕ್ಷೆ ಹೋಗಲು ವಿಜ್ಞಾನಿಗಳ ತಂಡ ತೀರ್ಮಾನ ಮಾಡಿದ್ದು, ಅದರಂತೆ ಇಂದು ಯಶಸ್ವಿ ಉಡಾವಣೆ ಮಾಡಲಾಗಿದೆ. ಈ ಮೂಲಕ ಪಿಎಸ್‍ಎಲ್‍ವಿ ಸಿ 57 ಹೆಸರಿನ ಎಕ್ಸ್ಟ್ರಾ ಲಾರ್ಜ್ ರಾಕೆಟ್ ಬರೊಬ್ಬರಿ 1450 ಕೆ.ಜಿ ತೂಕವಿದ್ದು, ಒಟ್ಟು ಅಧ್ಯಯನಕ್ಕೆ ಬೇಕಾದ 7 ಉಪಕರಣಗಳನ್ನು ಹೊತ್ತೊಯ್ದಿದೆ.
ಸೌರ ಚಟುವಟಿಕೆ ಮತ್ತು ಬಾಹ್ಯಕಾಶ ವಾತವರಣದ ಮೇಲಿನ ಪರಿಣಾಮವನ್ನು ಅಧ್ಯಯನ ಮಾಡುವುದು ಈ ಅಧ್ಯಯನದ ಪ್ರಮುಖ ಅಂಶವಾಗಿದೆ. ಉಡಾವಣೆ ಬಳಿಕ ನಿರ್ದಿಷ್ಟ ಸ್ಥಳವಾದ ಎಲ್ 1 ಪಾಯಿಂಟ್ ತಲುಪಲು ಬರೊಬ್ಬರಿ 120 ದಿನಗಳನ್ನು ತೆಗೆದುಕೊಳ್ಳಲಿದೆ. ಕಕ್ಷೆಯನ್ನು ತಲುಪಿದ ಬಳಿಕ ರಾಕೆಟ್ ಹೊತ್ತೊಯ್ಯುವ 8 ಉಪಕರಣಗಳ ಸ್ವಿಚ್ ಪ್ರೋಗ್ರಾಂಮಿಂಗ್ ಮೂಲಕ ತಮ್ಮ ಕಾರ್ಯವನ್ನು ಆರಂಭಿಸಲಿವೆ. ಮುಖ್ಯವಾಗಿ ಎಲ್ 1 ಕಕ್ಷೆಯಲ್ಲೇ ಈ ಎಲ್ಲಾ ಕಾರ್ಯಗಳು ಸರಾಗವಾಗಿ ಆಗಲು ಸಾಧ್ಯ. ಆ ಕಾರಣಕ್ಕೆ ಸದ್ಯ ಇಸ್ರೋ ಕೂಡ ಇದೇ ಪಾಯಿಂಟ್ ಆಯ್ಕೆ ಮಾಡಿದೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಈ ಕಕ್ಷೆಯಲ್ಲಿ, ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಸಮನಾಗಿರುತ್ತದೆ. ಇಲ್ಲಿ ಯಾವುದೇ ಉಪಗ್ರಹ ನಿಯೋಜಿಸಿದರು ಯಾವುದೇ ಅಡ್ಡಿ ಆತಂಕ ಇರೋದಿಲ್ಲ. ಜೊತೆಗೆ ಗ್ರಹಣದಂತ ಅಡ್ಡಿ ಆತಂಕ ಇಲ್ಲದೆ ಅಧ್ಯಯನ ಸರಾಗವಾಗಿ ಸಾಗುವ ಮೂಲಕ ಹೆಚ್ಚು ಇಂಧನ ವ್ಯರ್ಥವಾಗದ ಕಾರಣ ಈ ಜಾಗ ಅಧ್ಯಯನಕ್ಕೆ ಸೂಕ್ತವಾಗಿದ್ದು, ಬರೊಬ್ಬರಿ ನಾಲ್ಕೂವರೆ ವರ್ಷಗಳ ಕಾಲ ಕಕ್ಷೆಯಲ್ಲಿ ಅಧ್ಯಯನ ನಡೆಸಲಿದೆ.





