Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ರಾಜ್ಯ ಸರ್ಕಾರದ 100 ವೈಫಲ್ಯಗಳ‌ ಚಾರ್ಜ್​ಶೀಟ್ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಬಹುಮತೊಂದಿಗೆ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ ಇದೀಗ ನೂರು ದಿನಗಳನ್ನು ಪೂರೈಸಿದೆ.ಇತ್ತ ಬಿಜೆಪಿ ರಾಜ್ಯ ಸರ್ಕಾರದ 100 ವೈಫಲ್ಯಗಳ‌ ಚಾರ್ಜ್​ಶೀಟ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಇಂದು ರಾಜ್ಯ ಸರ್ಕಾರದ 100 ವೈಫಲ್ಯಗಳನ್ನು ಒಳಗೊಂಡ ಒಂದು ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ ಎಂಬ ಹೆಸರಿನ ಪುಸ್ತಕ ಇದಾಗಿದೆ. ಕೇವಲ ಮಾಧ್ಯಮ ವರದಿಗಳನ್ನೇ ಮುದ್ರಿಸಿ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಆರೋಪಗಳು ಸೇರಿದಂತೆ ವರ್ಗಾವಣೆ ದಂಧೆ, ಶಾಸಕರು-ಸಚಿವರ ನಡುವಿನ ಹಗ್ಗಜಗ್ಗಾಟ ಸೇರಿದಂತೆ ಇತರೆ ವಿಷಯನ್ನೊಳಗೊಂಡಿದೆ.

100 ವೈಫಲ್ಯಗಳ‌ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈ ನೂರು ದಿನಗಳಲ್ಲಿ ಕಾಂಗ್ರೆಸ್​​ ಸರ್ಕಾರ ಜನದ್ರೋಹ ಮಾಡಿದೆ. ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ನಂತರ ನೂರಾರು ತಪ್ಪು ಮಾಡಿದೆ. ಇಬ್ಬರು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ರಾಜೀನಾಮೆ ಪಡೆಯಲಿಲ್ಲ. ನಮ್ಮ ಸರ್ಕಾರವಿದ್ದಾಗ ಬಂಡವಾಳ ಹೂಡಿಕೆ ಅತಿ ಹೆಚ್ಚು ಬಂದಿತ್ತು. ಈಗ ವಿದ್ಯುತ್ ದರ ಹೆಚ್ಚಳ, ವ್ಯತ್ಯಯದಿಂದ ಹೂಡಿಕೆದಾರರು ವಾಪಸ್ ಹೋಗಿದ್ದಾರೆ. ರೈತ ವಿದ್ಯಾನಿಧಿ, ಕಿಸಾನ್​​ ಸಮ್ಮಾನ್ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. 2 ಶಕ್ತಿಗಳು ಸಿಎಂ ಕಂಟ್ರೋಲ್ ಮಾಡುತ್ತಿವೆ ಎಂಬುದನ್ನು ಕೇಳಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲೂ ಸರ್ಕಾರ ವಿಫಲವಾಗಿದೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದರು.

ಎಲ್ಲದ್ದಕ್ಕಿಂತ ಹೆಚ್ಚಾಗಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕುತ್ತಿದ್ದಾರೆ. ಹಿಂದಿನ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಾಧ್ಯಮಗಳ ಮೇಲೂ ಇವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ವಿಫಲರಾಗಿದ್ದಾರೆ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಮೂರು ತಿಂಗಳಲ್ಲಿ ಶಾಸಕರ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ನೂರು ದಿನಗಳಲ್ಲಿ ಮಾಡಿರುವ ತಪ್ಪುಗಳ ಬಗ್ಗೆ ಜನರ ಮುಂದೆ ಇಡುತ್ತೇವೆ ಎಂದರು.

ಇನ್ನು ಇದೇ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಇದು ದಿಕ್ಕುತಪ್ಪಿದ ಸರ್ಕಾರವಾಗಿದೆ. ಬಹುಮತದ ಸರ್ಕಾರ 5 ವರ್ಷದ ಆಡಳಿತದ ದಿಕ್ಸೂಚಿ ಹೇಳಬೇಕಿತ್ತು. ಆದರೆ, ಸರ್ಕಾರದ ಹಲವಾರು ವಿಚಾರಗಳಲ್ಲಿ ವೈಫಲ್ಯ ಮತ್ತು ಗೊಂದಲ ಇದೆ. ನಾಡಿನ ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಣಕಾಸಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಳಿ ತಪ್ಪಿದೆ ಎಂದು ಗುಡುಗಿದರು.

8 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ, ಎಲ್ಲಾ ತೆರಿಗೆ ಹೆಚ್ಚಿಸಿದ್ದಾರೆ. ಸಾಲ ಮತ್ತು ತೆರಿಗೆ ಮೂಲಕ 45 ಸಾವಿರ ಕೋಟಿ ಆದಾಯ ಇದ್ದರೂ 12 ಸಾವಿರ ಕೋಟಿ ರೂ. ಖೋತಾ ಬಜೆಟ್ ಮಂಡಿಸಿದ್ದಾರೆ. ಹಲವಾರು ಸಂಘ ಮತ್ತು ಸಂಸ್ಥೆಗಳ ಸಂಬಳ ಸರಿಯಾಗಿ ಆಗುತ್ತಿಲ್ಲ. ರಾಜ್ಯದಲ್ಲಿ 1 ಕಿ.ಮೀ. ರಸ್ತೆ ಕೂಡ ಕಾಂಗ್ರೆಸ್ ನಿರ್ಮಾಣ ಮಾಡಿಲ್ಲ. ಕೃಷಿ ಸೇರಿ ಹಲವು ಇಲಾಖೆಯಲ್ಲಿ ವರ್ಗಾವಣೆಯ ಸುಗ್ಗಿ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ