Mysore
22
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸೂರ್ಯನ ಅಧ್ಯಯನಕ್ಕೆ ಮುಂದಾದ ಇಸ್ರೋ : ಸೆಪ್ಟೆಂಬರ್ 2ಕ್ಕೆ ಆದಿತ್ಯ ಎಲ್1 ಉಡಾವಣೆ

ನವದೆಹಲಿ : ಯಶಸ್ವಿ ಚಂದ್ರಯಾನದ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಬೆಳಗ್ಗೆ11:50 ಕ್ಕೆ ಆದಿತ್ಯ ಎಲ್1 ಅನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮಾಹಿತಿ ಹಂಚಿಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗಲಿದೆ ಎಂದು ಹೇಳಿದೆ.

ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಎರಡು ವಾರಗಳ ಹಿಂದೆಯೇ ಶ್ರೀಹರಿಕೋಟಾಕ್ಕೆ ಕಳುಹಿಸಿ ಕೊಡಲಾಗಿದ್ದು ಅಂತಿಮ ಹಂತದ ತಯಾರಿಗಳು ನಡೆಯುತ್ತಿವೆ. ಆದಿತ್ಯ-ಎಲ್1 ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ಸೂರ್ಯನ ಹೊರಗಿನ ಪದರಗಳು (ಕರೊನಾ) ಮತ್ತು ಬೇರೆ ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಲಿದೆ. ಇದಕ್ಕಾಗಿ ಬಾಹ್ಯಾಕಾಶ ನೌಕೆಯು ದ್ಯುತಿಗೋಳ, ವರ್ಣಗೋಳ (ಸೂರ್ಯನ ಗೋಚರ ಮೇಲ್ಮೈಗಿಂತ ಸ್ವಲ್ಪ ಮೇಲೆ) ಮತ್ತು ಸೂರ್ಯನ ಹೊರಗಿನ ಪದರವನ್ನು (ಕರೊನಾ) ವಿವಿಧ ತರಂಗ ಬ್ಯಾಂಡ್‌ಗಳಲ್ಲಿ ವೀಕ್ಷಿಸಲು ಸಹಾಯ ಮಾಡುವ ಏಳು ಪೇಲೋಡ್‌ಗಳನ್ನು ಒಯ್ಯುತ್ತದೆ.

ಸುಮಾರು 4 ತಿಂಗಳು ಆದಿತ್ಯ-ಎಲ್1 ಕ್ರಮಿಸಿದ ಬಳಿಕ ಡೇಟಾವನ್ನು ಇಸ್ರೋಗೆ ಕಳುಹಿಸಲಿದೆ. ಆದಿತ್ಯ-ಎಲ್1 ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ದವಾಗಿರುವ ಸ್ವದೇಶಿ ಪ್ರಯತ್ನವಾಗಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಪೇಲೋಡ್‌ನ ನಿರ್ಮಾಣದ ಪ್ರಮುಖ ಸಂಸ್ಥೆಯಾಗಿದೆ. ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾನಿಲಯ ಕೇಂದ್ರವೂ ಸೌರ ನೇರಳಾತೀತ ಇಮೇಜರ್ ಪೇಲೋಡ್ ಅನ್ನು ಮಿಷನ್ ಗಾಗಿ ಅಭಿವೃದ್ಧಿಪಡಿಸಿದೆ.

ಕ್ರೋಮೋಸ್ಪಿಯರ್ ಕೀಗಳು ಮತ್ತು ಎಕ್ಸ್-ರೇ ಪೇಲೋಡ್‌ಗಳನ್ನು ಬಳಸಿಕೊಂಡು ಸೂರ್ಯನ ಜ್ವಾಲೆಗಳನ್ನು ಮೇಲ್ವಿಚಾರಣೆ ಮಾಡಿ ಮಾಹಿತಿಯನ್ನು ಒದಗಿಸುತ್ತದೆ. ಪಾರ್ಟಿಕಲ್ ಡಿಟೆಕ್ಟರ್ ಮತ್ತು ಮ್ಯಾಗ್ನೆಟೋಮೀಟರ್ ಪೇಲೋಡ್ ಚಾರ್ಜ್ಡ್ ಕಣಗಳು ಮತ್ತು ಎಲ್-1 ಸುತ್ತ ಹೊರಗಿನ ಕಕ್ಷೆಯನ್ನು ತಲುಪುವ ಕಾಂತಕ್ಷೇತ್ರದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ಬಾಹ್ಯ ಕಕ್ಷೆಯಲ್ಲಿ ಇರಿಸಲು ಯೋಜಿಸಲಾಗಿದೆ.

ಆದಿತ್ಯ ಎಲ್1 ಮಿಷನ್ ಸೂರ್ಯನನ್ನು ಮತ್ತು ನಮ್ಮ ಗ್ರಹದ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ನೌಕೆಯಿಂದ ಸಂಗ್ರಹಿಸಲಾದ ಡೇಟಾವು ಸೂರ್ಯನ ಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ಹವಾಮಾನದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲಿದೆ.

ಉಪಗ್ರಹ 1,500 ಕೆಜಿ (3,300 ಎಲ್ ಬಿ) ತೂಕ ಹೊಂದಿದೆ. ಈ ಉಪಗ್ರಹ ಹೊಂದಿರುವ ಪೇಲೋಡ್‌ಗಳು ಸೂರ್ಯನ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಈ ಪೇಲೋಡ್‌ಗಳು ಸೌರ ಬಿರುಗಾಳಿ ಮತ್ತು ಇತರ ಬಾಹ್ಯಾಕಾಶ ಹವಾಮಾನದ ಕುರಿತು ನಿಖರವಾದ ಮಾಹಿತಿ ನೀಡಿ, ನಮ್ಮ ಉಪಗ್ರಹಗಳು ಮತ್ತು ತಂತ್ರಜ್ಞಾನಗಳು ಹಾಳಾಗದಂತೆ ಕಾಪಾಡಲು ನೆರವಾಗುತ್ತವೆ. ಸೂರ್ಯನ ಅನ್ವೇಷಣೆ ಮಾಡಬೇಕಾದರೆ ಅಷ್ಟೆಲ್ಲಾ ತಾಪಮಾನವನ್ನು ಗ್ರಹಿಸಿ ಡೇಟಾ ಕಳುಹಿಸಬೇಕು ಅಂದರೆ ಉಪಗ್ರಹವೂ ಅಷ್ಟೇ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ