ಮಂಡ್ಯ : ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಲಂಚ ಆರೋಪ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇದೀಗ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆ.ಆರ್.ಪೇಟೆಯ ಕೃಷಿ ಅಧಿಕಾರಿಗಳಾದ ಶಿವಪ್ರಸಾದ್, ಗುರುದತ್ ಎನ್ನುವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಅರೋಪ ಪತ್ರವನ್ನು ಬರೆದಿರುವುದು ಇವರೇ ಎನ್ನುವುದು ತಿಳಿದುಬಂದಿದೆ. ಇನ್ನು ಪತ್ರ ಬರೆಯಲು ಹೇಳಿದ್ಯಾರು? ಲಂಚ ಕೇಳಿದ್ದಕ್ಕೆ ರಾಜ್ಯಪಾಲರಿಗೆ ಪತ್ರ ಬರೆಯಲಾಯಿತೇ? ಈ ಪತ್ರ ಬರೆದಿರುವ ಹಿಂದಿನ ಉದ್ದೇಶವೇನು? ಹೀಗೆ ಹಲವು ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಇನ್ನು ಈ ಬಗ್ಗೆ ಮಂಡ್ಯದಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈವರೆಗೂ ಸಿಐಡಿ ಅಧಿಕಾರಿಗಳ ಯಾವುದೇ ವರದಿ ನನಗೆ ತಲುಪಿಲ್ಲ. ಸಿಐಡಿ ತಂಡ ವರದಿ ನೀಡಿದ ಬಳಿಕ ಗೊತ್ತಾಗಲಿದೆ. ಮೇಲ್ನೋಟಕ್ಕೆ ಮಂಡ್ಯದ ಅಧಿಕಾರಿಗಳಲ್ಲ ಎಂದು ಖಚಿತವಾಗಿ ಗೊತ್ತಾಗಿದೆ. ಆ ಇಬ್ಬರೇ ಎಲ್ಲರ ಸಹಿ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಮಾಹಿತಿ ಪಡೆಯುತ್ತೇನೆ, ಸುಮ್ಮನೆ ಊಹಾಪೋಹದಿಂದ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಜನಪರ ಕೆಲಸ ಮಾಡುವುದು ಮುಖ್ಯ. ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಸಿಐಡಿಗೆ ಜವಾಬ್ದಾರಿ ಕೊಟ್ಟಿದ್ದಾರೆ, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ವರದಿ ಬರುವ ಮೊದಲೇ ಮಾತನಾಡುವುದು ಸೂಕ್ತವಲ್ಲ. ನಾನೇ ಮೊದಲೇ ನಿರಾಳವಾಗಿದ್ದೆ ಎಂದರು.