Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಮೊರೆಹೋದ ತಮಿಳುನಾಡು

ನವದೆಹಲಿ : ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ತಮ್ಮ ಪಾಲಿನ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ಗೆ ಸೋಮವಾರ ಅರ್ಜಿ ಸಲ್ಲಿಸಿದೆ.

ಕರ್ನಾಟಕ ನೀರು ಬಿಡದ ಕಾರಣ ರಾಜ್ಯದಕಲ್ಲಿ ಬೆಳೆ ಹಾನಿಯಾಗಿದೆ. ತಮಿಳುನಾಡಿನ ಕಾವೇರಿ ನದಿ ಪಾತ್ರದಲ್ಲಿ ಬೆಳೆಗಳು ಒಣಗುತ್ತಿವೆ. ತಮ್ಮ ಪಾಲಿನ ನೀರು ಬಿಡುಗಡೆಗೆ ಸೂಚಿಸುವಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಮಿಳುನಾಡು ಸರ್ಕಾರ ಉಲ್ಲೇಖಿಸಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕವು ಕಾವೇರಿ ನೀರು ನಿಯಂತ್ರಣ ಸಮಿತಿಯ ಸೂಚನೆಯನ್ನು ಪಾಲಿಸುತ್ತಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಕಳೆದ ವಾರ ಆರೋಪಿಸಿದ್ದರು.

ಅಲ್ಲದೆ, ಈ ವಿಚಾರವಾಗಿ ಸುಪ್ರೀಂ ಕೋರ್ಟ್​ಗೆ ಮೊರೆಹೋಗುತ್ತೇವೆ ಎಂದೂ ಹೇಳಿದ್ದರು. ಅದಕ್ಕೂ ಮುನ್ನ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ಸಭೆಯಿಂದ ಹೊರನಡೆದ ಘಟನೆಯೂ ನಡೆದಿತ್ತು.

ಕಾವೇರಿ ನೀರು ಬಿಡುಗಡೆ; ಕರ್ನಾಟಕದ ವಾದವೇನು? : ಕರ್ನಾಟಕದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿಯೂ ಹೇಳಿಕೊಳ್ಳುವಂಥ ಮಳೆಯಾಗಿಲ್ಲ. ಹೀಗಾಗಿ ಹೆಚ್ಚು ನೀರು ಬಿಡುವುದು ಕಷ್ಟ ಎಂಬುದು ಕರ್ನಾಟಕದ ವಾದವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳ ಕಾಲ 15,000 ಕ್ಯೂಸೆಕ್ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಇದಕ್ಕೆ ಕಳೆದ ಶುಕ್ರವಾರ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಅಸಮ್ಮತಿ ಸೂಚಿಸಿದ್ದರು.

ಆಗಸ್ಟ್ 22 ರವರೆಗೆ ತಮಿಳುನಾಡಿಗೆ ಕೇವಲ 8,000 ಕ್ಯೂಸೆಕ್‌ಗಳನ್ನು ಮಾತ್ರ ಬಿಡುಗಡೆ ಮಾಡಬಹುದಷ್ಟೇ ಎಂದು ಕರ್ನಾಟಕದ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದ ಕಾರಣವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಇದು ತಮಿಳುನಾಡಿನ ಅಸಮಾಧಾನಕ್ಕೆ ಕಾರಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!