ನವದೆಹಲಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ಪಾಕ್ ಸರ್ಕಾರ ಪಾಕ್ ತಂಡಕ್ಕೆ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿಂದೆ ಪಾಕಿಸ್ತಾನ ವಿಶ್ವಕಪ್‌ಗಾಗಿ ಭಾರತಕ್ಕೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಅನೇಕ ಊಹಾಪೋಹಗಳು ಇದ್ದವು. ವಿಶ್ವಕಪ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ತಂಡದ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.
ಕ್ರೀಡೆಯನ್ನು ರಾಜಕೀಯದಿಂದ ಪ್ರತ್ಯೇಕವಾಗಿಡಬೇಕು ಎಂಬುದನ್ನು ಪಾಕಿಸ್ತಾನ ಯಾವಾಗಲೂ ನಂಬುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯು ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಅಡ್ಡಿಯಾಗಬಾರದು ಎಂದು ಪಾಕಿಸ್ತಾನ ನಂಬುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಆದಾಗ್ಯೂ, ತಂಡದ ಭದ್ರತೆಯ ಬಗ್ಗೆ ತನಗೆ ತೀವ್ರ ಕಳವಳವಿದೆ. ಅದನ್ನು ಐಸಿಸಿ ಮತ್ತು ಭಾರತೀಯ ಮಂಡಳಿಗೆ ತಿಳಿಸುವುದಾಗಿ ಸಚಿವಾಲಯ ಹೇಳಿದೆ. ‘ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಅದು ಹೇಳಿದೆ.
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ವೇಳಾಪಟ್ಟಿ
ಪಾಕಿಸ್ತಾನ ಕ್ರಿಕೆಟ್ ತಂಡ ODI ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 6ರಂದು ಆಡಲಿದೆ. ಎರಡನೇ ಪಂದ್ಯಕ್ಕಾಗಿ ಶ್ರೀಲಂಕಾ ವಿರುದ್ಧ ಅಕ್ಟೋಬರ್ 12ರಂದು ತಂಡವು ಮೈದಾನಕ್ಕಿಳಿಯಲಿದೆ. ಅದೇ ಸಮಯದಲ್ಲಿ, ಅವರ ಮೂರನೇ ಪಂದ್ಯವು ಅಕ್ಟೋಬರ್ 14 ರಂದು ಭಾರತದ ವಿರುದ್ಧ ನಡೆಯಲಿದೆ.
ಇದಲ್ಲದೆ, ಅವರು ಅಕ್ಟೋಬರ್ 20ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಅದಾದ ನಂತರದ ಪಂದ್ಯ ಅಕ್ಟೋಬರ್ 23 ರಂದು ಅಫ್ಘಾನಿಸ್ತಾನದೊಂದಿಗೆ ನಡೆಯಲಿದೆ. ಮತ್ತೊಂದೆಡೆ, ಅಕ್ಟೋಬರ್ 27 ರಂದು ಪಾಕಿಸ್ತಾನವು ದಕ್ಷಿಣ ಆಫ್ರಿಕಾದೊಂದಿಗೆ ಪೈಪೋಟಿ ನಡೆಸಲಿದೆ. ಇದಲ್ಲದೇ ಅಕ್ಟೋಬರ್ 31ರಂದು ಪಾಕಿಸ್ತಾನ ತಂಡ ಬಾಂಗ್ಲಾದೇಶದೊಂದಿಗೆ ಸೆಣಸಲಿದೆ. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನವೆಂಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಅದೇ ಸಮಯದಲ್ಲಿ, ಅವರ ಕೊನೆಯ ಲೀಗ್ ಪಂದ್ಯವು ನವೆಂಬರ್ 12 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದೆ.