Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕೆಎಸ್ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ| ವೈಯಕ್ತಿಕ ಕಾರಣ ಹೊರತು ರಾಜಕೀಯ ಪ್ರಚೋದನೆ ಇಲ್ಲ: ಸಿಐಡಿ ವರದಿ

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೆ.ಎಸ್ ಆರ್ ಟಿ.ಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ವೈಯಕ್ತಿಕ ಕಾರಣವೇ ಹೊರತು ರಾಜಕೀಯ ಒತ್ತಡ ಅಥವಾ ಪ್ರಚೋದನೆ ಇಲ್ಲ ಎಂದು ಸಿಐಡಿ ವರದಿ ನೀಡಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ವಹಿಸಲಾಗಿತ್ತು‌. ಸದನದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿ ನಡುವಿನ ವಾಗ್ಯುದ್ಧಕ್ಕೂ ಕಾರಣವಾಗಿತ್ತು.

ಈ ಬಗ್ಗೆ ಸಿಐಡಿ ತನಿಖಾ‌ ತಂಡದ ವರದಿಯ ವಿವರವನ್ನು ಸದನದಲ್ಲಿ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, 38 ಸಾಕ್ಷಿಗಳನ್ನು ಸಿಐಡಿ ತನಿಖಾ ತಂಡ‌ ವಿಚಾರಣೆ ನಡೆಸಿತ್ತು. ಇದು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಯತ್ನ ಎಂದು ಸಿಐಡಿ ವರದಿ ನೀಡಿದೆ. ಯಾವುದೇ ರಾಜಕೀಯ, ಮಾನಸಿಕ ಒತ್ತಡದಿಂದಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದರು.

ವರ್ಗಾವಣೆ ರದ್ದು ಪಡಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಕೀಟನಾಶಕ ಸೇವನೆಯನ್ನು ಚಾಲಕ ಮಾಡಿದ್ದಾನೆ.
ಚಾಲಕ ಜಗದೀಶ್ ಹಾಗೂ ಸುಸೈಡ್ ನೋಟ್ ಬರೆದು ಕೊಟ್ಟ ಚಾಲಕ ನವೀನ್ ಕುಮಾರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ‌.

ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್ ಎಸ್ ಎಲ್ ವಿರುದ್ಧ ಇಲಾಖೆ ಶಿಸ್ತು ಕ್ರಮಕ್ಕೆ ತನಿಖಾ‌ ತಂಡ ಶಿಫಾರಸು ಮಾಡಿದೆ. ಚಾಲಕ ಇದ್ದ ಆಂಬ್ಯುಲೆನ್ಸ್ ತಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಐಡಿ ಶಿಪಾರಸು ಮಾಡಿದೆ ಎಂದು ಸದನಕ್ಕೆ ತಿಳಿಸಿದರು. ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳದ ಠಾಣಾಧಿಕಾರಿ ಅಶೋಕ್ ಕುಮಾರ್ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದೆ ಎಂದು ಮಾಹಿತಿಯನ್ನು ನೀಡಿದರು‌.

ಆದರೆ ವರದಿ ಬಗ್ಗೆ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ,‌ವರದಿ ನ್ಯಾಯೋಚಿತವಾಗಿಲ್ಲ.ಇದರಲ್ಲಿ ಯಾರನ್ನೋ ರಕ್ಷಣೆ ಮಾಡುವ ಉದ್ದೇಶ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಶಾಸಕರ ಮಾನ ಮರ್ಯಾದೆ ಕಳೆದಿದ್ದಾರೆ. ಕುಮಾರಸ್ವಾಮಿ ಏನು ದೇವರಾ? ಅವರ ಬಗ್ಗೆ ನಾವು ಮಾತನಾಡಬಾರದಾ? ಅವರು ಮಾಜಿ ಸಿಎಂ ಎಂದು ನಮಗೂ ಗೌರವ ಇದೆ. ಆದರೆ ಇಲ್ಲಸಲ್ಲದ ಆರೋಪ ಮಾಡಿದರೆ ಹೇಗೆ? ನಾವು ಹೇಗೆ ತಡೆದುಕೊಳ್ಳಬೇಕು? ವರದಿಯಲ್ಲಿ ಅಧಿಕಾರಿಗಳು ಯಾರನ್ನೂ ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ