Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಮಾಜ ಸೇವಕ ಅಯೂಬ್ ಅಹ್ಮದ್ ರಿಗೆ ಪದ್ಮಶ್ರೀ ನೀಡಿ : ಮೊದಿಗೆ ಪತ್ರ ಬರೆದ ಪ್ರತಾಪ್ ಸಿಂಹ,‌ ತನ್ವೀರ್‌ ಸೇಠ್

ಮೈಸೂರು : ಕಳೆದ 22 ವರ್ಷಗಳಿಂದ ಸಾವಿರಾರು ಅನಾಥ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ‘ಬಾಡಿ ಮಿಯಾನ್’ ಎಂದೇ ಹೆಸರುವಾಸಿಯಾಗಿರುವ ಮೈಸೂರಿನ ರಾಜೀವ್ ನಗರ ನಿವಾಸಿ ಅಯೂಬ್ ಅಹ್ಮದ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಸಂಸದ ಪ್ರತಾಪ್ ಸಿಂಹ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.

ರಸ್ತೆಯಲ್ಲಿ, ಕೆರೆ ಅಥವಾ ಹೊಳೆಯಲ್ಲಿ ಸಾವಿಗೀಡಾಗಿ ಯಾರೂ ಮುಟ್ಟಲು ಹಿಂಜರಿಯುವಂತಹ ಮೃತದೇಹಗಳು ಸೇರಿದಂತೆ ಸಾವಿರಾರು ಅನಾಥ ಮೃತದೇಹಗಳನ್ನು ಅಯೂಬ್ ಅಹ್ಮದ್ ಧೈರ್ಯವಾಗಿ ಎತ್ತಿಕೊಂಡು ಹೋಗಿ ತನ್ನ ಸ್ವಂತ ಹಣದಲ್ಲೇ ಅಂತ್ಯಸಂಸ್ಕಾರ ಮಾಡುತ್ತಾರೆ. ಯಾವುದೇ ಜಾತಿ, ಧರ್ಮ ಎನ್ನುವುದನ್ನು ನೋಡದೇ ಯಾವುದೆ ಫಲಾಪೇಕ್ಷೆಯಿಲ್ಲದೆ ತನ್ನ ಕೆಲಸವನ್ನು ದಿನದ ಇಪ್ಪತ್ತನಾಲ್ಕುಗಂಟೆಗಳಲ್ಲೂ ತೊಡಗಿಸಿಕೊಂಡಿದ್ದರು.

ಅಯೂಬ್ ಅಹ್ಮದ್ ವೃತ್ತಿಯಲ್ಲಿ ಮಂಡಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ನಿಷ್ಕಲ್ಮಶ ಮನಸ್ಸಿನಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನಾಥ ಮೃತದೇಹಗಳನ್ನು ಸಾಗಿಸಲೆಂದೇ ಒಂದು ಅಂಬಾಸಿಡರ್ ಮತ್ತು ಮಾರುತಿ ಓಮಿನಿ ಕಾರನ್ನು ಇಟ್ಟುಕೊಂಡಿದ್ದು, ಯಾರೇ ಒಂದು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ತಕ್ಷಣ ಆ ಸ್ಥಳಕ್ಕೆ ಹೋಗಿ ಪೊಲೀಸರಿಗೆ ವಿಷಯ ತಲುಪಿಸಿ ಆ ಅನಾಥ ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಮೂರು ದಿನಗಳ ವರೆಗೆ ಇರಿಸಿ ನಂತರ ಯಾರೂ ಬರದಿದ್ದರೆ ಸ್ವತಃ ಅಯೂಬ್ ಅಹ್ಮದ್ ಅವರೇ ರುದ್ರಭೂಮಿಗೆ ಕೊಂಡೊಯ್ದು ಸ್ವಂತ ಖರ್ಚಿನಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಈ ರೀತಿ ಅವರು ಇದೂವರೆಗೆ 16 ಸಾವಿರ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಆಪತ್ಬಾಂದವ : ಕೊರೋನ ಸಂದರ್ಭದಲ್ಲಿ ಇಡೀ ವಿಶ್ವವೇ ಹೆದರಿ ಮನೆಯಲ್ಲಿ ಕುಳಿತಿದ್ದರೂ ಅಯೂಬ್ ಅಹ್ಮದ್ ಮಾತ್ರ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದರು. ಕೊರೋನಕ್ಕೆ ಬಲಿಯಾದವರನ್ನು ಅವರ ಹೆಂಡತಿ, ಮಕ್ಕಳೇ ಮುಖ ನೋಡಲು ಬಾರದಿದ್ದ ಸಂದರ್ಭದಲ್ಲಿ ಅಯೂಬ್ ಅಹ್ಮದ್ ಮುಂದೆ ನಿಂತು ಶವ ಸಂಸ್ಕಾರ ಮಾಡಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇದರ ಜೊತೆಗೆ ಅಮೇರಿಕದ ಹಾರ್ಮೋನಿ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ವೇಳೆ ದಸರಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಾಗಾಗಿ ಶಾಸಕ ತನ್ವೀರ್ ಸೇಠ್ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 2024 ನೇ ಸಾಲಿ ಪದ್ಮಶ್ರೀ ಪ್ರಶಸ್ತಿಗೆ ಅಯೂಬ್ ಅಹ್ಮದ್ ರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ