ನವದೆಹಲಿ: ದೇಶದ ಹಲವೆಡೆ ಈಗಲೂ ಟೊಮೇಟೊ ಕೆಜಿಗೆ 160 ರೂ.ಗೆ ಪ್ರೀಮಿಯಂ ದರದಲ್ಲಿ ಮಾರಾಟವಾಗುತ್ತಿದ್ದು, ಭಾನುವಾರದಿಂದ (ಜುಲೈ 16) ಪ್ರತಿ ಕೆಜಿ ಟೊಮೇಟೊವನ್ನು 80 ರೂ.ಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದ 500ಕ್ಕೂ ಹೆಚ್ಚು ಕಡೆಗಳಲ್ಲಿ ಬೆಲೆ ಏರಿಕೆ ಪರಿಸ್ಥಿತಿಯ ಮರು ಮೌಲ್ಯಮಾಪನ ನಡೆಸಿದ ನಂತರ, ಇಂದಿನಿಂದ (ಜು.16) ದೇಶದ ಹಲವೆಡೆ ಕೆಜಿ ಟೊಮೇಟೊವನ್ನು80 ರೂ.ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಹಕಾರ ಕ್ಷೇತ್ರದ ಎನ್ಎಎಫ್ಇಡಿ ಮತ್ತು ಎನ್‌ಸಿಸಿಎಫ್ ಮೂಲದ ದೆಹಲಿ, ನೋಯ್ಡಾ, ಲಖನೌ, ಕಾನ್ಪುರ, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರಾಹ್ ಸೇರಿದಂತೆ ಹಲವು ಕಡೆಗಳಲ್ಲಿ ಇಂದು ಟೊಮೆಟೊ ಮಾರಾಟ ಪ್ರಾರಂಭವಾಗಿದೆ ಎಂದು ತಿಳಿಸಿದೆ.
ಆಯಾ ಸ್ಥಳಗಲ್ಲಿನ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ಸೋಮವಾರದಿಂದ ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ದೇಶದ ಹಲವೆಡೆ ಟೊಮೇಟೊ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕದಿಂದ ಟೊಮೇಟೊ ಖರೀದಿ ಮಾಡುವಂತೆ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಬುಧವಾರ ಸೂಚಿಸಿತ್ತು.
ದೆಹಲಿ-ಎನ್‌ಸಿಆರ್‌ನಾದ್ಯಂತ ಸರಿಸುಮಾರು 18,000 ಕೆಜಿ ಟೊಮೇಟೊಗಳನ್ನು ಮಾರಾಟ ಮಾಡಲಾಗಿದೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ.





