Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಚಂದ್ರಯಾನ-3ರ ಯಶಸ್ವಿ ಉಡಾವಣೆ: ಗಣ್ಯರು ಹೇಳಿದ್ದೇನು.?

ಶ್ರೀಹರಿಕೋಟಾ: “ಚಂದ್ರಯಾನ-3 ಚಂದ್ರನ ಕಡೆಗಿನ ತನ್ನ ಪ್ರಯಾಣವನ್ನು ಆರಂಭಿಸಿದೆ. ಅದಕ್ಕೆ ಶುಭವಾಗಲಿ ಎಂದು ಹಾರೈಸೋಣ” ಎಂದು ಸಂಭ್ರಮದ ಮುಖದೊಂದಿಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಡ್ ಪ್ಯಾಡ್‌ನಿಂದ ಚಂದ್ರಯಾನ-3 ನೌಕೆಯನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಶುಕ್ರವಾರ ನಿಗದಿತ ಸಮಯ ಮಧ್ಯಾಹ್ನ 2.35ಕ್ಕೆ ಸರಿಯಾಗಿ ಉಡಾವಣೆಗೊಂಡಿತು. ನಂತರ ಚಂದ್ರಯಾನ ನೌಕೆಯು ತನ್ನ ಎಲ್ಲಾ ಮೂರೂ ಆರಂಭಿಕ ಹಂತಗಳನ್ನು ಯಶಸ್ವಿಯಾಗಿ ಪೂರೈಸುವುದರೊಂದಿಗೆ ನಿಗದಿತ ಕಕ್ಷೆ ಸೇರ್ಪಡೆಗೊಂಡಿತು.

ಈ ವೇಳೆ ಎಸ್ ಸೋಮನಾಥ್ ಹಾಗೂ ಇಸ್ರೋದ ಇತರೆ ವಿಜ್ಞಾನಿಗಳ ತಂಡದ ಸಂಭ್ರಮಕ್ಕೆ ಪಾರವಿರಲಿಲ್ಲ. ಇನ್ನು 40 ದಿನಗಳ ಬಳಿಕ ಆಗಸ್ಟ್ 23 ಅಥವಾ 24ರಂದು ಚಂದ್ರನ ನೆಲದ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಸುಗಮವಾಗಿ ಇಳಿಸುವ ಅತ್ಯಂತ ಸಾಹಸಮಯ ಕಾರ್ಯ ಬಾಕಿ ಇದ್ದು, ಈ ಸಮಯಕ್ಕಾಗಿ ವಿಜ್ಞಾನಿಗಳು ಕಾತರದಿಂದ ಕಾಯಲಿದ್ದಾರೆ.

ಉಡಾವಣೆ ಯಶಸ್ವಿಯಾದ ಬಳಿಕ ಮಾತನಾಡಿದ ಎಸ್ ಸೋಮನಾಥ್, ಎಲ್‌ವಿಎಂ 3- ಎಂ4 ರಾಕೆಟ್ ಚಂದ್ರಯಾನ-3 ಅನ್ನು ಉದ್ದೇಶಿತ ಕಕ್ಷೆಗೆ ಸೇರ್ಪಡೆ ಮಾಡಿದೆ ಎಂದು ತಿಳಿಸಿದರು. “ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಚಂದ್ರನ ಮೇಲೆ ಲ್ಯಾಂಡರ್ ಸುಗಮವಾಗಿ ಇಳಿಯಲಿದೆ” ಎಂದು ಹೇಳಿದರು.

ವಿಕ್ರಂ ಸಾರಾಭಾಯ್ ಕನಸು: “ಖಂಡಿತವಾಗಿಯೂ ಇದು ಭಾರತದ ವೈಭವದ ಗಳಿಗೆ ಮತ್ತು ಇತಿಹಾಸ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ನಮಗೆಲ್ಲರಿಗೂ ಮಹತ್ವದ ಕ್ಷಣ. ಭಾರತಕ್ಕೆ ಹೆಮ್ಮೆ ಉಂಟುಮಾಡಿದ್ದಕ್ಕಾಗಿ ಇಸ್ರೋಗೆ ಧನ್ಯವಾದಗಳು” ಎಂದು ಬಾಹ್ಯಾಕಾಶ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.

“ಇದು ದಿಗ್ವಿಜಯದ ದಿನ. ಆರು ದಶಕಗಳ ಹಿಂದೆ ಡಾ. ವಿಕ್ರಂ ಸಾರಾಭಾಯ್ ಅವರು ಕಂಡ ಕನಸು ಈಡೇರಿದ ದಿನ. ಯಾವುದೇ ಮುಜುಗರ ಅಥವಾ ಹಿಂಜರಿಕೆ ಇಲ್ಲದೆ ಬೈಸಿಕಲ್‌ನಲ್ಲಿ ಉಡಾವಣಾ ವಾಹನಗಳನ್ನು ಸಾಗಿಸಿದ ಆ ಚಿತ್ರಗಳನ್ನು ಕಂಡಾಗ, ವಿಕ್ರಂ ಮತ್ತು ಅವರ ತಂಡಕ್ಕೆ ಭಾರತದ ಶಕ್ತಿಯ ಬಗ್ಗೆ ನಂಬಿಕೆ ಇತ್ತು ಎಂಬ ಅರಿವಾಗುತ್ತದೆ. ಮತ್ತು ನಾವು ಈಗ ಭಾರತದ ಸ್ವದೇಶಿ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ” ಎಂದು ಬಣ್ಣಿಸಿದರು.

ನರೇಂದ್ರ ಮೋದಿ ಟ್ವೀಟ್: “ಚಂದ್ರಯಾನ-3 ಭಾರತದ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಇದು ಎತ್ತರಕ್ಕೆ ಸಾಗುತ್ತಾ, ಪ್ರತಿ ಭಾರತೀಯನ ಕನಸು ಹಾಗೂ ಮಹತ್ವಾಕಾಂಕ್ಷೆಯನ್ನು ಮೇಲೆ ಕೊಂಡೊಯ್ಯುತ್ತಿದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಬದ್ಧತೆಗೆ ಸಾಕ್ಷಿ. ಅವರ ಉತ್ಸಾಹ ಮತ್ತು ದಕ್ಷತೆಗೆ ನಾನು ವಂದಿಸುತ್ತೇನೆ!” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

“ಭಾರತವು ಇಂದು ಚಂದ್ರಯಾನ- 3ರ ಯಶಸ್ವಿ ಉಡಾವಣೆಯೊಂದಿಗೆ ತನ್ನ ಐತಿಹಾಸಿಕ ಬಾಹ್ಯಾಕಾಶ ಪ್ರಯಾಣವನ್ನು ಆರಂಭಿಸಿದೆ. ಹಲವು ಪೀಳಿಗೆಗಳು ಸಂಭ್ರಮಿಸುವಂತಹ ಬಾಹ್ಯಾಕಾಶ ಚರಿತ್ರೆಯನ್ನು ಸೃಷ್ಟಿಸುವ ಹಾದಿಯಲ್ಲಿ ಭಾರತವನ್ನು ಕೊಂಡೊಯ್ಯಲು ಸತತ ಪರಿಶ್ರಮಪಡುತ್ತಿರುವ ಇಸ್ರೋ ವಿಜ್ಞಾನಿಗಳಿಗೆ ಮನಃಪೂರ್ವಕ ಅಭಿನಂದನೆಗಳು” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಿದ್ದರಾಮಯ್ಯ ಅಭಿನಂದನೆ: “ಚಂದ್ರಯಾನ-3ರ ಯಶಸ್ವಿ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಹಾಗೂ ಆವಿಷ್ಕಾರದಲ್ಲಿ ಹೊಸ ಮೈಲುಗಲ್ಲು. ಈ ಸಾಧನೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸಲು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ