Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಷಸ್ 2023: ಎಂಎಸ್‌ ಧೋನಿಗೆ ಬೆನ್‌ ಸ್ಟೋಕ್ಸ್‌ರನ್ನು ಹೋಲಿಸಿದ ರಿಕಿ ಪಾಂಟಿಂಗ್!

ಹೊಸದಿಲ್ಲಿ: ಟೀಮ್ ಇಂಡಿಯಾ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಯಂತೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಕೂಡ ಒತ್ತಡದಲ್ಲಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಯ ಅಂಗವಾಗಿ ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಸೋಲಿನ ದವಡೆಗೆ ಸಿಲುಕಿದ್ದರೂ ನಾಯಕ ಬೆನ್ ಸ್ಟೋಕ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ 214 ಎಸೆತಗಳಲ್ಲಿ 155 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೂ ಇತರೆ ಬ್ಯಾಟರ್‌ಗಳ ವೈಫಲ್ಯದಿಂದ ಇಂಗ್ಲೆಂಡ್ 43 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿತ್ತು.

ಇಂಗ್ಲೆಂಡ್ ನಾಯಕನ ಈ ಸ್ಫೋಟಕ ಬ್ಯಾಟಿಂಗ್‌ ನನಗೆ 2019ರ ಹೆಡಿಂಗ್ಲೆ ಟೆಸ್ಟ್ ನೆನಪಿಸುವಂತಿತ್ತು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೇಳಿದ್ದಾರೆ. ಅಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು 359 ರನ್ ಗುರಿ ಪಡೆದಿತ್ತು, ಬೆನ್ ಸ್ಟೋಕ್ಸ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ 135 ರನ್ ಬಾರಿಸಿ ತಂಡಕ್ಕೆ ಒಂದು ವಿಕೆಟ್ ರೋಚಕ ಗೆಲುವು ತಂದುಕೊಟ್ಟಿದ್ದರು.

ಬೆನ್ ಸ್ಟೋಕ್ಸ್‌ಗೆ ರಿಕಿ ಪಾಂಟಿಂಗ್‌ ಪ್ರಶಂಸೆ: ಐಸಿಸಿ ರಿವ್ಯೂನ ಇತ್ತೀಚೆಗಿನ ಸಂಚಿಕೆಯಲ್ಲಿ ಮಾತನಾಡಿದ್ದ ರಿಕಿ ಪಾಂಟಿಂಗ್, “ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನಾದರೂ ಒತ್ತಡದ ಪರಿಸ್ಥಿತಿಯಲ್ಲಿ ಬ್ಯಾಟ್ ಮಾಡುತ್ತಾರೆ.‌ ಆದರೆ, ಬೆನ್ ಸ್ಟೋಕ್ಸ್ ಮಧ್ಯಮ ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯ ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ, ಇಂಥಾ ಪ್ರವೃತ್ತಿ ಸಾಕಷ್ಟು ಬ್ಯಾಟರ್‌ಗಳಿಗಿಲ್ಲ,” ಎಂದು ಹೇಳಿದ್ದಾರೆ.

“ಮೊದಲಿಗೆ ಮನಸ್ಸಿಗೆ ಬರುವುದು ಎಂಎಸ್ ಧೋನಿಯಂತಹ ಗ್ರೇಟ್ ಫಿನಿಷರ್. ಅವರು ಟಿ20 ಸ್ವರೂಪದಲ್ಲಿ ಸಾಕಷ್ಟು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರು ಟೆಸ್ಟ್ ಸ್ವರೂಪದಲ್ಲೂ ಆ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ಆಟಗಾರರು ಫಿನಿಶರ್ ಪಾತ್ರದಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ. ಆದರೆ, ನಾಯಕನಾಗಿ ಒತ್ತಡದ ಸಂದರ್ಭದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆಯೆ?” ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಪ್ರಶ್ನಿಸಿದ್ದಾರೆ.

ಹೆಡ್ಲಿಂಗ್ ಟೆಸ್ಟ್ ನೆನಪಿಸಿದ್ದರು: ಆಷಸ್ ಟೆಸ್ಟ್ ಸರಣಿಯ ನಾಲ್ಕನೇ ಇನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಆಡಿದ ಆಟ 2019ರ ಹೆಡಿಂಗ್ಲೆ ಟೆಸ್ಟ್‌ ಪಂದ್ಯವನ್ನು ನೆನಪಿಸಿತು ಎಂದು ಪಂಟರ್ ಹೇಳಿದ್ದಾರೆ. “ಎಲ್ಲರ ಮನಸ್ಸಿನಲ್ಲಿ ಒಂದು ಕ್ಷಣ 2019ರ ಹೆಡಿಂಗ್ಲೆ ಟೆಸ್ಟ್ ಹಾದು ಹೋದ ಅನುಭವವಾಗಿತ್ತು. ಆ ಪಂದ್ಯಕ್ಕೂ ಈ ಪಂದ್ಯಕ್ಕೂ ಎಷ್ಟು ಸ್ವಾಮ್ಯತೆ ಇತ್ತು. ಲಾರ್ಡ್ಸ್ ಟೆಸ್ಟ್‌ನಲ್ಲಿ ಬೆನ್ ಸ್ಟೋಕ್ಸ್ ಅವರ ಕ್ಯಾಚ್‌ ಅನ್ನು ಸ್ಟೀವನ್ ಸ್ಮಿತ್ ಕೈಚೆಲ್ಲಿದ್ದರೆ, ಅಂದಿನ ಹೆಡಿಂಗ್ಲೆ ಟೆಸ್ಟ್‌ನಲ್ಲಿ ಸ್ಟೋಕ್ಸ್ 116 ರನ್ ಗಳಿಸಿದ್ದಾಗ ಮಾರ್ಕಸ್ ಹ್ಯಾರಿಸ್ ಕ್ಯಾಚ್ ಬಿಟ್ಟಿದ್ದರು,” ಎಂದು ಪಾಂಟಿಂಗ್‌ ಹೇಳಿದ್ದಾರೆ.

ಹೆಡಿಂಗ್ಲೆ ಟೆಸ್ಟ್‌ಗೆ ಸ್ಟೋಕ್ಸ್ ಪಡೆ ‌ಸಜ್ಜು: ಪ್ರಸ್ತುತ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ 5 ಪಂದ್ಯಗಳ ಆಷಸ್ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ತಂಡ, ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 2 ವಿಕೆಟ್ ಮತ್ತು 43 ರನ್‌ಗಳಿಂದ ಸೋಲು ಅನುಭವಿಸಿದೆ. ಆ ಮೂಲಕ 0-2 ಹಿನ್ನಡೆ ಅನುಭವಿಸಿದ್ದು ಜುಲೈ 6 (ಗುರುವಾರ) ಹೆಡಿಂಗ್ಲೆಂಡ್‌ಯಲ್ಲಿ ಮೂರನೇ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಇಂಗ್ಲೆಂಡ್ ಪ್ರಯತ್ನಿಸಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ