Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಶ್ವಕಪ್‌ಗಿಂತಲೂ ದೊಡ್ಡದು ಮತ್ತೊಂದಿಲ್ಲ, ಕ್ರಿಕೆಟ್‌ನ ಒಲಿಂಪಿಕ್ಸ್‌ ಇದು: ವೀರೇಂದ್ರ ಸೆಹ್ವಾಗ್‌!

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಯೋಜಿಸುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಕ್ರಿಕೆಟ್‌ನ ಒಲಿಂಪಿಕ್ಸ್‌ ಇದ್ದಹಾಗೆ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. ಇದೇ ವರ್ಷ ಭಾರತದ ಆತಿಥ್ಯದಲ್ಲಿ ಒಡಿಐ ವಿಶ್ವಕಪ್‌ ನಡೆಯಲಿದ್ದು, ಈ ಸಲುವಾಗಿ ಐಸಿಸಿ ಮಂಗಳವಾರ (ಜೂ.27) ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಅಕ್ಟೋಬರ್‌ 5ರಿಂದ ನವೆಂಬರ್‌ 15ರವರೆಗೆ ಟೂರ್ನಿ ನಡೆಯಲಿದ್ದು, ಭಾರತ ತಂಡ ಐದು ಬಾರಿಯ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಅ.8ರಂದು ಕಾದಾಟ ನಡೆಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

2011ರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ಒಡಿಐ ವಿಶ್ವಕಪ್‌ ಟೂರ್ನಿ ಆಯೋಜನೆ ಆದ ಸಂದರ್ಭದಲ್ಲಿ ಎಂಎಸ್‌ ಧೋನಿ ಸಾರಥ್ಯದ ಭಾರತ ತಂಡ ಟ್ರೋಫಿ ಗೆದ್ದಿತ್ತು. ಇದೀಗ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಕೂಡ ಅಂಥದ್ದೇ ಸಾಧನೆ ಮೆರೆಯಲು ಎದುರು ನೋಡುತ್ತಿದೆ. ಕಳೆದ 2 ವರ್ಷಗಳಲ್ಲಿ ನಡೆದ ಬ್ಯಾಕ್‌ ಟು ಬ್ಯಾಕ್‌ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ವೈಫಲ್ಯ ಕಂಡ ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಆಯೋಜಿತ ಯಾವುದೇ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ 2023ರ ವಿಶ್ವಕಪ್‌ ಗೆದ್ದು ಟ್ರೋಫಿ ಗೆಲುವಿನ ಬರ ನೀಗಿಸಿಕೊಳ್ಳುವ ಲೆಕ್ಕಾಚಾರ ಮಾಡಿದೆ.

ನವೆಂಬರ್‌ 19ಕ್ಕೆ ಫೈನಲ್: 

ಟೂರ್ನಿಯ ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 15 ಮತ್ತು 16ರಂದು ಜರುಗಲಿದ್ದು, ಫೈನಲ್‌ ಪಂದ್ಯ ನವೆಂಬರ್ 19ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಭಾರತದ ವಿಶ್ವಕಪ್‌ ವಿನ್ನರ್‌ ವೀರೇಂದ್ರ ಸೆಹ್ವಾಗ್‌, ಒಡಿಐ ವಿಶ್ವಕಪ್‌ ಟೂರ್ನಿಯ ಮಹತ್ವವನ್ನು ಕೊಂಡಾಡಿದ್ದಾರೆ.

“ನನ್ನ ಪ್ರಕಾರ ಒಡಿಐ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯೇ ಬಹುದೊಡ್ಡದು. ನಾಣು ಒಮ್ಮೆ ಫೈನಲ್‌ ತಲುಪಿದ್ದೇನೆ, ಮತ್ತೊಂದು ಫೈನಲ್‌ನಲ್ಲಿ ಟ್ರೋಫಿ ಗೆದ್ದಿದ್ದೇನೆ. ಮತ್ತೊಂದು ವಿಶ್ವಕಪ್‌ನಲ್ಲಿ ಆರಂಭಿಕ ಸುತ್ತಿನಲ್ಲೇ ಸೋತ ಅನುಭವವೂ ಇದೆ. ಹೀಗಾಗಿ ನನ್ನ ಪಯಣ ಸಾಕಷ್ಟು ಏಳುಬೀಳಿನಿಂದ ಕೂಡಿತ್ತು. ನನ್ನ ಪಾಲಿನ ಅತ್ಯುತ್ತಮ ವಿಶ್ವಕಪ್‌ ಎಂದರೆ 2003 ಮತ್ತು 2011ರ ವಿಶ್ವಕಪ್‌. 2011ರಲ್ಲಿ ನಮ್ಮ ಗೆಲುವು ಅವಿಸ್ಮರಣೀಯ. ಅಲ್ಲಿಯವರೆಗೂ ಆತಿಥೇಯ ತಂಡ ವಿಶ್ವಕಪ್ ಗೆದ್ದಿರಲಿಲ್ಲ. ಹೀಗಾಗಿ ನಾವು ಗೆದ್ದು ಇತಿಹಾಸ ಬರೆಯಲೇಬೇಕೆಂಬ ಒತ್ತಡವೂ ಇತ್ತು,” ಎಂದು ಸೆಹ್ವಾಗ್‌ ಹೇಳಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ