ಬೆಂಗಳೂರು: ಬಿಜೆಪಿಯ ನಾಯಕರು ವರ್ಷದ 365 ದಿನವೂ ಧರಣಿ ಮಾಡುತ್ತಲೇ ಇರಲಿ, ವಿರೋಧ ಪಕ್ಷದಲ್ಲಿದ್ದು ಹೋರಾಟ ಮಾಡಲಿ, ನಾವು ಜನಸೇವೆ ಮಾಡುವುದನ್ನು ಮುಂದುವರೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಪಂಚಖಾತ್ರಿ ಯೋಜನೆಗಳ ಕುರಿತಂತೆ ಬಿಜೆಪಿಯವರು ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹಗಳಂತ ಹೋರಾಟಗಳನ್ನು ನಡೆಸುವುದಾಗಿ ಹೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರುಗಳಿಗೆ ಈಗಲೂ ಸೋಲಿನ ಆತ್ಮವಿಮರ್ಶನ ಮಾಡಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಪ್ರತಿಭಟನೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅನ್ನಭಾಗ್ಯ, ಗೃಹಜ್ಯೋತಿ ಸೇರಿದಂತೆ ಕಾಂಗ್ರೆಸ್ ನೀಡಿದಂತಹ ಪಂಚಖಾತ್ರಿಗಳನ್ನು ಚಾಚೂ ತಪ್ಪದೇ ಜಾರಿ ಮಾಡುತ್ತೇವೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೇ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಅಕ್ಕಿ ಅಥವಾ ಭತ್ತವನ್ನು ಏಕಾಏಕಿ ಬೆಳೆಯಲಾಗುವುದಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಖರೀದಿಸಿ ದಾಸ್ತಾನು ಮಾಡಿರುವುದನ್ನು ನೀಡದೇ ಯೋಜನೆಗೆ ಅಡ್ಡಿಪಡಿಸುತ್ತಿದೆ.
ಕೇಂದ್ರ ಸರ್ಕಾರದ ಅಂಗ ಸಂಸ್ಥೆಗಳಿಂದ ಆಹಾರ ಧಾನ್ಯ ಖರೀದಿಗಾಗಿ ಕೊಟೇಷನ್ ಕೇಳಿದ್ದೇವೆ. ಒಂದು ವೇಳೆ ಅವರು ಒಪ್ಪದೇ ಇದ್ದರೆ ನಾವೇ ನೇರವಾಗಿ ಎಲ್ಲಿಂದಲಾದರೂ ಖರೀದಿ ಮಾಡಿ ಜನರಿಗೆ ನೀಡುತ್ತೇವೆ ಎಂದು ಹೇಳಿದರು.
ಕೆಲವು ಕಡೆ ರಾಗಿ, ಜೋಳ, ಗೋ ನೀಡಬೇಕು ಎಂಬ ಬೇಡಿಕೆ ಬಂದಿವೆ. ಕೇಂದ್ರ ಸರ್ಕಾರ ಸಹಕಾರ ನೀಡದೇ ಇದ್ದರೆ ವಿ ಇಲ್ಲದೇ ರಾಜ್ಯಸರ್ಕಾರವೇ ಖರೀದಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೃಹಲಕ್ಷ್ಮಿ ಯೋಜನೆ ಕೂಡ ಕಾಲಮಿತಿಯಲ್ಲಿ ಆರಂಭಗೊಳ್ಳುತ್ತದೆ. ಅದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.





