Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಧೋನಿ-ಜಡೇಜಾ ಫೈಟ್ ಬಗ್ಗೆ ಕೊನೆಗೂ ಮೌನ ಮುರಿದ ಸಿಎಸ್​ಕೆ ಸಿಇಒ

IPL 2023 : ರವೀಂದ್ರ ಜಡೇಜಾ ಇಡೀ ಸೀಸನ್​ನಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದರು. ಇದೀಗ ಈ ಎಲ್ಲಾ ವಿವಾದಗಳಿಗೆ ತೆರೆ ಎಳೆಯುವ ಕೆಲಸವನ್ನು ಸಿಎಸ್​ಕೆ ಸಿಇಒ ಮಾಡಿದ್ದಾರೆ.

16ನೇ ಆವೃತ್ತಿಯ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳನ್ನು ಬೌಂಡರಿಗಟ್ಟುವ ಮೂಲಕ ಚೆನ್ನೈ ತಂಡವನ್ನು ಐದನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದ ರವೀಂದ್ರ ಜಡೇಜಾ ಇಡೀ ಸೀಸನ್​ನಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದರು. ಇದೀಗ ಈ ಎಲ್ಲಾ ವಿವಾದಗಳಿಗೆ ತೆರೆ ಎಳೆಯುವ ಕೆಲಸವನ್ನು ಸಿಎಸ್​ಕೆ ಸಿಇಒ ಮಾಡಿದ್ದಾರೆ.

ವಾಸ್ತವವಾಗಿ ಇಡೀ ಸೀಸನ್​ನಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ಅದು ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ನಡುವೆ ಯಾವುದು ಸರಿ ಇಲ್ಲ ಎಂಬುದು. ಪ್ರಮುಖವಾಗಿ ಡೆಲ್ಲಿ ವಿರುದ್ಧ ನಡೆದ ಪಂದ್ಯದ ಬಳಿಕ ಮೈದಾನದಲ್ಲಿ ಧೋನಿ ಹಾಗೂ ಜಡೇಜಾ ನಡೆಸಿದ ಮಾತುಕತೆ ಈ ಚರ್ಚೆಗೆ ನಾಂದಿ ಹಾಡಿತ್ತು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ಪಂದ್ಯದಲ್ಲಿ ರವೀಂದ್ರ ಜಡೇಜಾ 4 ಓವರ್ ಬೌಲ್ ಮಾಡಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟಿದ್ದರು. ಇದರಿಂದ ಕೋಪಗೊಂಡ ಧೋನಿ, ಮೈದಾನದಲ್ಲೇ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿದ್ದರು.

ಇಬ್ಬರ ನಡುವಿನ ಆ ಮಾತುಕತೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಜಡೇಜಾ ಹಂಚಿಕೊಂಡಿದ್ದ ಅದೊಂದು ಪೋಸ್ಟ್ ಈ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದೆ ಎಂಬುದಕ್ಕೆ ಪುಷ್ಠಿ ನೀಡಿತ್ತು. ವಾಸ್ತವವಾಗಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಜಡೇಜಾ, ಖಂಡಿತವಾಗಿಯೂ ಕರ್ಮ ನಿಮ್ಮ ಬಳಿಗೆ ಬಂದೇ ಬರುತ್ತದೆ. ಅದು ಬೇಗನೆ ಬರಬಹುದು ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಎಂಬ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಡೆಫಿನೆಟ್ಲಿ ಎಂಬ ಶೀರ್ಷಿಕೆಯನ್ನು ನೀಡಿದ್ದರು.

ಇದನ್ನು ಗಮನಿಸಿದ ಫ್ಯಾನ್ಸ್ ಜಡೇಜಾ ಹಾಗೂ ಧೋನಿ ಸಂಬಂಧ ಹಳಸಿದೆ ಎಂದು ಮಾತನಾಡಲಾರಂಭಿಸಿದರು. ಇದಲ್ಲದೆ, ಚೆನ್ನೈ ಅಭಿಮಾನಿಗಳು ಧೋನಿಯ ಬ್ಯಾಟಿಂಗ್ ನೋಡುವ ಸಲುವಾಗಿ ಜಡೇಜಾ ಬೇಗನೇ ವಿಕೆಟ್ ಒಪ್ಪಿಸಲಿ ಎಂಬ ಪ್ಲೇ ಕಾರ್ಡ್​ಗಳನ್ನು ಪ್ರದರ್ಶಿಸಿದ್ದರು. ಇದು ಜಡೇಜಾ ಮನಸಿಗೆ ನೋವುಂಟು ಮಾಡಿತ್ತು.

ಆ ಬಳಿಕ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅಪ್‌ಸ್ಟಾಕ್ಸ್ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಪ್ರಶಸ್ತಿ ಪಡೆದ ರವೀಂದ್ರ ಜಡೇಜಾ, “ಅಪ್‌ಸ್ಟಾಕ್ಸ್‌ಗೆ ಗೊತ್ತು ಆದರೆ… ಕೆಲವು ಅಭಿಮಾನಿಗಳಿಗೆ ಗೊತ್ತಿಲ್ಲ” ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದು ರವೀಂದ್ರ ಜಡೇಜಾ ಸಿಎಸ್​ಕೆ ತಂಡದಲ್ಲಿ ಖುಷಿಯಾಗಿಲ್ಲ ಎಂಬುದನ್ನು ಎತ್ತಿ ತೋರಿಸಿತ್ತು. ಆದರೆ ಇವೆಲ್ಲ ಗೊಂದಲಗಳಿಗೆ ಈಗ ತೆರೆ ಎಳೆದಿರುವ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್, ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಹಾಗೆಯೇ ಧೋನಿ ಹಾಗೂ ಜಡೇಜಾ ನಡುವೆ ಅಂತಹದ್ದೇನು ನಡೆದಿಲ್ಲ ಎಂದಿದ್ದಾರೆ.

ಜಡೇಜಾ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ನಮ್ಮ ಬ್ಯಾಟಿಂಗ್ ಲೈನ್ ಅಪ್​ನಲ್ಲಿ ರುತುರಾಜ್, ಕಾನ್ವೇ, ಮೊಯಿನ್, ರಹಾನೆ ದುಬೆಯಂತಹ ಆಟಗಾರರಿದ್ದಿದ್ದರಿಂದ ಜಡೇಜಾ ಸರದಿ ಬರುವ ವೇಳೆಗೆ ಅವರಿಗೆ ಕೇವಲ ಐದಾರು ಎಸೆತಗಳು ಮಾತ್ರ ಉಳಿದಿರುತ್ತಿದ್ದವು. ಈ ಸಮಯದಲ್ಲಿ ಜಡೇಜಾ ಬ್ಯಾಟಿಂಗ್​ನಲ್ಲಿ ಕೆಲವೊಮ್ಮೆ ಕ್ಲಿಕ್ ಆಗುತ್ತಿದ್ದರು, ಕೆಲವೊಮ್ಮೆ ಆಗುತ್ತಿರಲಿಲ್ಲ.

ಇನ್ನೊಂದು ವಿಷಯವೆಂದರೆ ನನ್ನ ಬಳಿಕ ಧೋನಿ ಬರುತ್ತಾರೆ ಎಂಬುದು ಜಡೇಜಾಗೆ ತಿಳಿದಿತ್ತು. ಹೀಗಾಗಿ ಜಡೇಜಾಗೆ ಕೆಲವೊಮ್ಮೆ ಕೇವಲ 2-3 ಎಸೆತಗಳು ಸಿಗುತ್ತಿದ್ದವು. ಅಂತಹ ಸಮಯದಲ್ಲಿ ಜಡೇಜಾ ಬ್ಯಾಟಿಂಗ್​ಗೆ ತೆರಳಿದಾಗ ಅಭಿಮಾನಿಗಳು ಧೋನಿ ಬ್ಯಾಟಿಂಗ್ ನೋಡುವ ಸಲುವಾಗಿ, ಜಡೇಜಾ ಬೇಗ ವಿಕೆಟ್ ಕಳೆದುಕೊಳ್ಳಲಿ ಎಂದು ಭಾವಿಸುತ್ತಿದ್ದರು. ಇದು ಒಂದು ರೀತಿಯಲ್ಲಿ ಜಡೇಜಾಗೆ ನೋಯಿಸಿರಬಹುದು. ಆ ವಿಷಯಕ್ಕೆ ಸಂಬಂಧಿಸಿದ ಜಡೇಜಾ ಟ್ವೀಟ್ ಮಾಡಿದರಾದರೂ ಅದರ ಬಗ್ಗೆ ದೂರು ನೀಡಲಿಲ್ಲ ಎಂದು ವಿಶ್ವನಾಥನ್ ESPNCricinfo ಗೆ ತಿಳಿಸಿದ್ದಾರೆ.

ಅಲ್ಲದೆ ಡೆಲ್ಲಿ ವಿರುದ್ಧದ ಪಂದ್ಯ ಮುಗಿದ ಬಳಿಕ ನಾನು ಜಡೇಜಾ ಜೊತೆಗೆ ಮಾತನಾಡುತ್ತಿರುವುದನ್ನು ನೋಡಿದವರು, ಧೋನಿ ಹಾಗೂ ಜಡೇಜಾ ನಡುವಿನ ಜಗಳವನ್ನು ಶಮನಗೊಳಿಸಲು ವಿಶ್ವನಾಥನ್ ಪ್ರಯತ್ನಿಸುತ್ತಿದ್ದಾರೆ ಎಂಬರ್ಥವನ್ನು ನೀಡಿದ್ದರು. ಆದರೆ ಅದು ಹಾಗಲ್ಲ. ನಾನು ಅವರೊಂದಿಗೆ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೆ ಎಂದಿದ್ದಾರೆ.

ಇನ್ನು ಧೋನಿ ಹಾಗೂ ಜಡೇಜಾ ನಡುವಿನ ವಾಕ್ಸಮರದ ಬಗ್ಗೆ ಮಾತನಾಡಿದ ವಿಶ್ವನಾಥನ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ನಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಜಡೇಜಾ ಅವರು ಯಾವಾಗಲೂ ಧೋನಿ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಫೈನಲ್‌ ಪಂದ್ಯದಲ್ಲೂ ಜಡೇಜಾ ಅದನ್ನು ವ್ಯಕ್ತಪಡಿಸಿದ್ದರು. ಗೆಲುವಿನ ಇನ್ನಿಂಗ್ಸ್ ಆಡಿದ ಬಳಿಕ ನಾನು ಈ ನಾಕ್ ಅನ್ನು ಧೋನಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದರು. ಇದು ಧೋನಿ ಬಗ್ಗೆ ಜಡೇಜಾ ಅವರಿಗೆ ಇರುವ ಗೌರವವನ್ನು ತೋರಿಸುತ್ತದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ