ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿದ್ದಾರೆ. ಶಿವಸೇನೆ ಸಂಸ್ಥಾಪನಾ ದಿನದ ಮುನ್ನಾ ದಿನ ಮುಂಬೈನಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಉದ್ಧವ್ ಠಾಕ್ರೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸುತ್ತಾ, ಹಿಟ್ಲರ್ ಕೂಡ ಹೀಗೆಯೇ, ಅವನ ಆರಂಭವೂ ಇದೇ ಆಗಿತ್ತು. ಮೊದಲು ಮಾಧ್ಯಮವನ್ನು ನಿಯಂತ್ರಿಸಿದನು. ನಂತರ ಅಧಿಕಾರವನ್ನು ಕೇಂದ್ರೀಕರಿಸಿದನು. ನಾವು ಹಿಟ್ಲರನ ಮಾರ್ಗವನ್ನು ಅನುಸರಿಸುತ್ತಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ. ರೈತರ ಪ್ರತಿಭಟನೆ ವೇಳೆ ಸಾಮಾಜಿಕ ಮಾಧ್ಯಮಗಳೆಲ್ಲಾ ಸರ್ಕಾರದ ಒತ್ತಡಕ್ಕೆ ಒಳಗಾಗಿತ್ತು ಎಂದು ಟ್ವಿಟರ್ ಮಾಜಿ ಸಿಇಒ ಜಾಕ್ ದೋರ್ಸಿ ಅವರ ಹೇಳಿಕೆ ಬೆನ್ನಲ್ಲೇ, ಠಾಕ್ರೆ ಈ ರೀತಿ ಪ್ರಶ್ನಿಸಿದ್ದಾರೆ.
ಮಣಿಪುರಕ್ಕೆ ಹೋಗದ ಪಿಎಂ ವಿರುದ್ಧ ಟೀಕೆ : ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ಮೋದಿಯವರನ್ನೂ ಠಾಕ್ರೆ ತರಾಟೆಗೆ ತೆಗೆದುಕೊಂಡರು. ಮೋದಿ ಅವರು ಅಮೆರಿಕಕ್ಕೆ ಹೋಗುತ್ತಿದ್ದಾರೆ ಆದರೆ ಮಣಿಪುರಕ್ಕೆ ಇದುವರೆಗೂ ಹೋಗಿಲ್ಲ. ನಿಮಗೆ ಧೈರ್ಯವಿದ್ದರೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಂಡಗಳನ್ನು ಮಣಿಪುರಕ್ಕೆ ಕಳುಹಿಸಿ. ಅಲ್ಲಿನ ಜನರು ಅವರನ್ನು ನಿಯಂತ್ರಿಸುತ್ತಾರೆ ಎಂದರು.
ಗೃಹ ಸಚಿವ ಅಮಿತ್ ಶಾ ಅವರನ್ನು ಅಫ್ಘಾನಿಸ್ತಾನದ ಆಡಳಿತಗಾರ ಅಹ್ಮದ್ ಶಾ ಅಬ್ದಾಲಿಗೆ ಪರೋಕ್ಷವಾಗಿ ಹೋಲಿಸಿದ್ದಾರೆ.
ಶಿವಸೇನೆ ಕಾರ್ಯಕರ್ತರಿಗೆ ಧನ್ಯವಾದ : ಶಿವಸೇನಾ ಸಂಸ್ಥಾಪನಾ ದಿನವಾದ್ದರಿಂದ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ನಿಮ್ಮಂತಹ ಹೋರಾಟಗಾರರು ನನ್ನೊಂದಿಗೆ ಇರುವುದು ನನ್ನ ಅದೃಷ್ಟ. ನಿಮ್ಮ ಸಾಲವನ್ನು ತೀರಿಸಲು ನನ್ನಿಂದ ಸಾಧ್ಯವಿಲ್ಲ. ನನ್ನ ಬಳಿ ಕಾಗದದ ಮೇಲೆ ಏನೂ ಇಲ್ಲ. ಪಕ್ಷದ ಹೆಸರಿಲ್ಲ, ಪಕ್ಷದ ಚಿಹ್ನೆ ಇಲ್ಲ, ಆದರೂ ನೀವೆಲ್ಲರೂ ನನ್ನೊಂದಿಗಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು’ ಎಂದರು.