ಬಹುನಿರೀಕ್ಷಿತ 2023ರ ಏಷ್ಯಾಕಪ್ ಪಂದ್ಯಾವಳಿಗೆ ಸ್ಥಳ ಹಾಗೂ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದೆ. ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.
ಏಷ್ಯಾಕಪ್ ಪಂದ್ಯಾವಳಿ ಆಯೋಜನೆಗೆ ಸ್ಥಳದ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಆದರೆ ಇದೀಗ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದ್ದು, ಪಂದ್ಯಾವಳಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯವಹಿಸಲಿವೆ. ಮಹತ್ವದ ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದರೆ, ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಈ ಸಂಬಂಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, “2023ರ ಏಷ್ಯಾಕಪ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಒಟ್ಟು 13 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದ್ದು, 4 ಪಂದ್ಯಗಳು ಪಾಕಿಸ್ತಾನದಲ್ಲಿ ಹಾಗೂ ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಯಲಿದೆ.
2023ರ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ಎಂಟು ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್-4 ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ ಏಷ್ಯಾಕಪ್ ಪಂದ್ಯಾವಳಿಯನ್ನ ಪಾಕಿಸ್ತಾನದಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿರ್ಧಾರಿಸಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಕೂಡ ಏಷ್ಯಾಕಪ್ ಅನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ಒಪ್ಪಿಗೆ ನೀಡಿರಲಿಲ್ಲ. ಇದರಿಂದಾಗಿ ಪಿಸಿಬಿ ಮತ್ತು ಬಿಸಿಸಿಐ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಇದೀಗ ಈ ಎಲ್ಲಾ ಗೊಂದಲಗಳಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೆರೆ ಎಳೆದಿದೆ.