Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

TNPL 2023 ಹೀನಾಯ ದಾಖಲೆ| ಒಂದೇ ಎಸೆತದಲ್ಲಿ 18 ರನ್: ಕ್ರಿಕೆಟ್ ಜಗತ್ತಿನ ದುಬಾರಿ ಬೌಲರ್

ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಕ್ರಿಕೆಟ್ ಜಗತ್ತಿನ ದುಬಾರಿ ಎಸೆತವೊಂದು ದಾಖಲಾಗಿದ್ದು, ಬೌಲರ್ ಓರ್ವ ಒಂದೇ ಎಸೆತದಲ್ಲಿ ಬರೊಬ್ಬರಿ 18 ರನ್ ನೀಡಿರುವ ಘಟನೆ ನಡೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಆರಂಭವಾಗಿರುವ ತಮಿಳುನಾಡು ಪ್ರೀಮಿಯರ್ ಲೀಗ್ ನ ಎರಡನೇ ಪಂದ್ಯವೇ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸದ್ದು ಮಾಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬೌಲರ್ ಒಬ್ಬರು ಒಂದು ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟು ಕ್ರಿಕೆಟ್ ಜಗತ್ತಿನ ದುಬಾರಿ ಎಸೆತವನ್ನು ಎಸೆದಿದ್ದಾರೆ.

ಸೇಲಂ ಸ್ಪಾರ್ಟನ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಸೇಲಂ ಸ್ಪಾರ್ಟನ್ಸ್ ನಾಯಕ ಮತ್ತು ವೇಗದ ಬೌಲರ್ ಅಭಿಷೇಕ್ ತನ್ವಾರ್ ಈ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ

ಚೆಪಾಕ್ ತಂಡದ ಬ್ಯಾಟಿಂಗ್ ನ ಕೊನೆಯ ಎಸೆತವಾಗಿತ್ತು. 20ನೇ ಓವರ್ ನ ಕೊನೆಯ ಎಸೆತವನ್ನು ಅಭಿಷೇಕ್ ಯಾರ್ಕರ್ ಎಸೆದಿದ್ದರು. ಬ್ಯಾಟರ್ ಬೌಲ್ಡ್ ಆಗಿದ್ದರು. ಆದರೆ ಅದು ನೋ ಬಾಲ್ ಆಗಿತ್ತು. ಮುಂದಿನ ಎಸೆತದಲ್ಲಿ ಬ್ಯಾಟರ್ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಆದರೆ ಅದು ಕೂಡಾ ನೋ ಬಾಲ್ ಆಗಿತ್ತು.. ತನ್ವಾರ್ ಮತ್ತೊಂದು ಚೆಂಡೆಸೆದರು.

ಸಂಜಯ್ ಯಾದವ್ ಎರಡು ರನ್ ಓಡಿದರು. ಆದರೆ ಆ ಎಸೆತವೂ ನೋ ಬಾಲ್. ಮುಂದಿನ ಎಸೆತ ವೈಡ್ ಬಾಲ್. ಕೊನೆಗೆ ತನ್ವಾರ್ ಸರಿಯಾದ ಎಸೆತ ಹಾಕಿದರು. ಆದರೆ ಆ ಎಸೆತವನ್ನು ಸಂಜಯ್ ಯಾದವ್ ಸಿಕ್ಸರ್ ಗೆ ಬಾರಿಸಿದ್ದರು. ಆ ಮೂಲಕ ಅಭಿಷೇಕ್ ತನ್ವಾರ್ ಒಂದೇ ಎಸೆತದಲ್ಲಿ ಬರೊಬ್ಬರಿ 18 ರನ್ ನೀಡಿದಂತಾಯಿತು.

ಒಟ್ಟಾರೆ ಆ ಓವರ್ ನಲ್ಲಿ ಅಭಿಷೇಕ್ ತನ್ವಾರ್ ಒಟ್ಟು 25 ರನ್ ಗಳನ್ನು ನೀಡಿದ್ದರು. ಅಭಿಷೇಕ್ ತನ್ವಾರ್ ಅವರ ಕೊನೆಯ ಓವರ್ ಹೀಗಿತ್ತು: 1 4 0 1 N 1 N N6 N2 Wd 6

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 217 ರನ್ ಮಾಡಿದರೆ, ಸೇಲಂ ಸ್ಪಾರ್ಟನ್ಸ್ ತಂಡವು 165 ರನ್ ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ 52 ರನ್ ಗಳ  ಹೀನಾಯ ಸೋಲು ಕಂಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ