Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿಧಾನಪರಿಷತ್ ನ ಮೂರು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ : ಇಂದೇ ಹೊರಬೀಳಲಿದೆ ಅಧಿಕೃತ ಅಧಿಸೂಚನೆ

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ ಮೂರು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದು, ಇಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

ಇಂದಿನಿಂದಲೇ ನಾಮಪತ್ರ ಪ್ರಕ್ರಿಯೆ ಆರಂಭವಾಗಲಿದ್ದು, ಜೂ.20 ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ವಿಧಾನಪರಿಷತ್ ಸದಸ್ಯರಾಗಿದ್ದ ಬಾಬಾರಾವ್ ಚಿಂಚನಸೂರ್ , ಆರ್ ಶಂಕರ್, ಹಾಗೂ ಲಕ್ಷ್ಮಣ ಸವದಿ ಅವರು ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯಿಂದ ತೆರವಾಗಿರುವ 3 ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ.

ವಿಧಾನಪರಿಷತ್ ನ ಉಪಚುನಾವಣೆಯ ಚುನಾವಣಾ ಅಧಿಕಾರಿಯಾಗಿ ವಿಧಾನಸಭೆ ಕಾರ್ಯದರ್ಶಿ ಕಾರ್ಯ ನಿರ್ವಹಿಸಲಿದ್ದಾರೆ.

ತೆರವಾಗಿರುವ 3 ಸ್ಥಾನಗಳು ಬೇರೆ ಬೇರೆ ಅವಧಿಯನ್ನು ಹೊಂದಿರುವುದರಿಂದ 3 ಪ್ರತ್ಯೇಕ ಉಪಚುನಾವಣೆಯ ಅಧಿಸೂಚನೆಗಳೂ ವೇಳಾಪಟ್ಟಿಯಂತೆ ಪ್ರಕಟವಾಗಲಿವೆ.

ಜೂ.21ರಂದು ಸಲ್ಲಿಕೆಯಾಗುವ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.23ರವರೆಗೂ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ಅಗತ್ಯ ಬಿದ್ದರೆ ಜೂ.30 ರಂದು ಮತದಾನ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ.

ಮತದಾನ ಮುಗಿದ ಬಳಿಕ ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

ವಿಧಾನ ಪರಿಷತ್ ನ 3 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯುವುದರಿಂದ ಆಡಳಿತಾರೂಢ ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದು, ಸುಲಭವಾಗಿ 3 ಸ್ಥಾನಗಳನ್ನು ಗೆಲ್ಲಬಹುದಾಗಿದೆ.ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಈ ಉಪಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ವೇಳೆ ಪ್ರತಿಪಕ್ಷಗಳು ಈ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೆ ಕಾಂಗ್ರೆಸ್ ನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಚುನಾವಣಾ ವೇಳಾಪಟ್ಟಿ ಘೋಷಣೆಯ ಬೆನ್ನಲ್ಲೇ ಮೇಲ್ಮನೆ ಸದಸ್ಯರಾಗಲು ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಆ ಪಕ್ಷದ ವರಿಷ್ಠರನ್ನು ಸಂಪರ್ಕಿಸಿ ವಿಧಾನಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ