Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕೈಕೊಟ್ಟ ವರುಣ : ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲದ ಕಾರಣ ಮಂಗಳವಾರ ಕೆಆರ್‌ಎಸ್ ಜಲಾಶಯ ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ.

ವರುಣನಿಗಾಗಿ ಹೋಮ-ಹವನ, ಗಂಗಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಎರಡು ವರ್ಷಗಳ ಹಿಂದೆಯೂ ಮಳೆ ಕೈಕೊಟ್ಟಿದ್ದ ಕಾರಣ ಭಾನುಪ್ರಕಾಶ ಶರ್ಮಾ ಅವರ ನೇತೃತ್ವದಲ್ಲಿ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಆ ನಂತರ ಉತ್ತಮ ಮಳೆಯಾಗಿ ಕಾವೇರಿ ಒಡಲು ಭರ್ತಿಯಾಗಿತ್ತು. ಅಕ್ಟೋಬರ್ ನಲ್ಲಿ ಜಲಾಶಯ ಭರ್ತಿಯಾಗಿ ನವೆಂಬರ್‌ನಲ್ಲಿ ಭಾಗಿನ ಅರ್ಪಿಸಲಾಗಿತ್ತು.

ಈ ಬಾರಿ ಆರಂಭದಲ್ಲೇ ಮಳೆ ಕೈಕೊಟ್ಟಿದ್ದು, 5 ವರ್ಷದ ಬಳಿಕ ಅತಿ ಕಡಿಮೆ ನೀರಿನ ಮಟ್ಟವನ್ನು ಕೆಆರ್‌ಎಸ್ ಜಲಾಶಯ ತಲುಪಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿಗೆ ಅಭಾವ ಶುರುವಾಗುವ ಸಾಧ್ಯತೆಯಿದೆ.

ಅಲ್ಲದೇ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಎದುರರಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 83 ಅಡಿ ನೀರು ಮಾತ್ರ ಸಂಗ್ರಹವಾಗಿದ್ದು, 12.152 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.

ಕಳೆದ ವಾರ 79 ಅಡಿಗೆ ನೀರಿನ ಮಟ್ಟ ಕುಸಿದಿತ್ತು, ಹೇಮಾವತಿ ಜಲಾಶಯದಿಂದ ನೀರು ಬಿಟ್ಟಿದ್ದ ಹಿನ್ನೆಲೆಯಲ್ಲಿ 83 ಅಡಿಗೆ ನೀರಿನ ಮಟ್ಟ ಏರಿಕೆಯಾಯಿತು. ಹೀಗಾಗಿ ಮಂಗಳವಾರ ಕಾವೇರಿ ಮಾತೆಯ ಎದುರು ವರುಣನಿಗಾಗಿ ವಿಶೇಷ ಹೋಮ ಹಾಗೂ ಪೂಜೆಯನ್ನು ನೆರವೇರಿಸಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!