ಚೆನ್ನೈ : ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆ, ಅತಿವೇಗದಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಪೆರಂಬಲೂರಿನ ಚೆನ್ನೈ-ತಿರುಚಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಇದಕ್ಕೂ ಮೊದಲು ವಾಹನವೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬ್ಯುಲೆನ್ಸ್‌ಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ.
ದಿಂಡಿಗಲ್‌ನ ನಾಗಲ್‌ನ 60 ವರ್ಷದ ಕುಪ್ಪುಸಾಮಿ ಎಂಬುವವರು ತಮ್ಮ ಸಂಬಂಧಿಕರೊಂದಿಗೆ ತಿರುವಣ್ಣಾಮಲೈನಿಂದ ಹಿಂದಿರುಗುತ್ತಿದ್ದರು. ಅವರ ವಾಹನವು ಪೆರಂಬಲೂರು ಸಮೀಪಿಸುತ್ತಿರುವಾಗ ಹಠಾತ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕುಪ್ಪುಸಾಮಿ, ಟ್ರ್ಯಾಕ್ಟರ್ ಚಾಲಕ ಸಮಿದಾಸ್ ಮತ್ತು ಇನ್ನೊಬ್ಬ ಪ್ರಯಾಣಿಕ ಶೇಖರ್ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದೆ. ಆ ವೇಳೆ ವೇಗವಾಗಿ ಬಂದ ವಾಹನ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದು, ಮೂವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕುಪ್ಪುಸಾಮಿ, ಅವರ ಮೊಮ್ಮಗಳು ಕವಿಪ್ರಿಯಾ ಮತ್ತು ಆಂಬ್ಯುಲೆನ್ಸ್ ಚಾಲಕ ರಾಜೇಂದ್ರನ್ ಮೂವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.
50 ಪೊಲೀಸರು ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮೃತರನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.