ಬೆಂಗಳೂರು : ಒಡಿಶಾದ ಬಾಲಸೋರ್ ರೈಲು ಅಪಘಾತ ದುರಂತದ ಸ್ಥಳದಲ್ಲಿ ಮೈಸೂರಿನ 30 ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಘಟನಾ ಸ್ಥಳದಲ್ಲಿರುವ ಸಂತ್ರಸ್ತರ ಜೊತೆ ಸಿಎಂ ಸಿದ್ದರಾಮಯ್ಯ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ. ಅಗತ್ಯವಾಗಿರುವ ಎಲ್ಲಾ ನೆರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ ಸಿದ್ದರಾಮಯ್ಯ ಅವರು ತಮ್ಮ ಸಹಾಯಕ್ಕೆ ಸಚಿವ ಸಂತೋಷ್ ಲಾಡ್ ಹಾಗೂ ಕಮಿಷನರ್ ಬರ್ತಿದಾರೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.
ಹೌರಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾರ್ಥಿಗಳು : ಅಂತರರಾಜ್ಯ ಮಟ್ಟದ ವಾಲಿಬಾಲ್ ಜ್ಯೂನಿಯರ್ ಟೂರ್ನಿಗೆ ರಾಜ್ಯದ ವಿವಿಧ ಭಾಗಗಳಿಂದ ಹೋಗಿರುವ ಕ್ರೀಡಾಪಟುಗಳು ಪಶ್ಚಿಮಬಂಗಾಳದಲ್ಲಿ ಸಿಲುಕಿಕೊಂಡಿದ್ದಾರೆ. ಒಟ್ಟು 31 ಕ್ರೀಡಾಪಟುಗಳು ರಾಜ್ಯದಿಂದ ತೆರಳಿದ್ದರು. ಮೇ.24ಕ್ಕೆ ರಾಜ್ಯದಿಂದ ಹೌರಾಗೆ ತೆರಳಿದ್ದರು. ನಿನ್ನೆ ರಾತ್ರಿ ಅಂದರೆ 02/06/2023 ರಾತ್ರಿ 10.55ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸ್ಸು ಬರಬೇಕಿತ್ತು. ರೈಲು ದುರಂತದ ಹಿನ್ನೆಲೆ ರೈಲುಗಳ ಸಂಚಾರ ರದ್ದಾಗಿದ್ದು, ವಾಪಸ್ಸು ರಾಜ್ಯಕ್ಕೆ ಬರಲು ಆಗದ ಕಾರಣ ಹೌರಾದಲ್ಲೇ ಕ್ರೀಡಾಪಟುಗಳು ಉಳಿದಿದ್ದಾರೆ.
ಸಚಿವ ಸಂತೋಷ್ ಲಾಡ್ ನಿಯೋಜನೆ : ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ. ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಸಂತೋಷ್ ಲಾಡ್ ಪ್ರಯಾಣ ಬೆಳಸಿದ್ದು, ತನ್ನದೇ ನಂಬರ್ ಅನ್ನು ಸಹಾಯಕ್ಕಾಗಿ ನೀಡಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲು ಅಧಿಕಾರಿಗಳ ಜೊತೆ ಅಪಘಾತದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಿಂದ ಪ್ರಧಾನಿ ಮೋದಿ ದೂರವಾಣಿ ಮೂಲಕ ಎನ್‌ಡಿಆರ್‌ಎಫ್ ಹಾಗೂ ರಕ್ಷಣಾ ತಂಡಗಳ ಮುಖ್ಯಸ್ಥರ ಜೊತೆಗೆ ಮಾತನಾಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಮೋದಿ, ಮಾಹಿತಿ ಪಡೆದುಕೊಂಡರು. ಬಳಿಕ ಕಟಕ್‌ಗೆ ತೆರಳಿದ್ದಾರೆ. ಆಸ್ಪತ್ರೆ ದಾಖಲಾಗಿರುವ ಗಾಯಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ಎಲ್ಲಾ ನೆರವು ನೀಡುವುದಾಗಿ ಮೋದಿ ಹೇಳಿದ್ದಾರೆ. ಧೈರ್ಯವಾಗಿರಿ, ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದಿದ್ದಾರೆ.
ಘಟನೆಯಲ್ಲಿ ಮಡಿದವರ ಕುಟಂಬಕ್ಕೆ 10 ಲಕ್ಷ ರೂಪಾಯಿ, ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಸಚಿವಾಲಯ ಘೋಷಿಸಿದೆ. ಇನ್ನು ಎಲ್ಲಾ ಗಾಯಾಳುಗಳಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದಿದ್ದಾರೆ.