Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಬ್ಸಿಡಿ ಕಡಿತ : ಜೂನ್‌ 1ರಿಂದ ದುಬಾರಿಯಾಗಲಿವೆ ಎಲೆಕ್ಟ್ರಿಕ್‌ ಸ್ಕೂಟರ್

ಬೆಂಗಳೂರು : ಜೂನ್ 1 ರಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳು ದುಬಾರಿಯಾಗಲಿವೆ. ಇವುಗಳ ಮೇಲೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇ- ಸ್ಕೂಟರ್‌ಗಳ ಬೆಲೆ ಏರಿಕೆಯಾಗಲಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ವೇಗದ ಅಳವಡಿಕೆ ಅಥವಾ ಫೇಮ್‌ ಯೋಜನೆಯ ಅಡಿಯಲ್ಲಿ ಸಬ್ಸಿಡಿಯನ್ನು ಪಡೆಯುತ್ತಿದ್ದರು. ಸದ್ಯ ಎರಡನೇ ಹಂತದ ಯೋಜನೆ ಜಾರಿಯಲ್ಲಿದೆ.
ಆದರೆ ಭಾರೀ ಕೈಗಾರಿಕೆಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ ಫೇಮ್-2 ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಪ್ರತಿ ಕಿಲೋವ್ಯಾಟ್‌ಗೆ 15,000 ರೂ.ನಿಂದ 10,000 ರೂ.ಗೆ ಇಳಿಸಲಾಗಿದೆ. ಇದಲ್ಲದೆ, ಯೋಜನೆಯಡಿಯಲ್ಲಿ ಗರಿಷ್ಠ ಸಬ್ಸಿಡಿಯನ್ನು ಎಕ್ಸ್-ಫ್ಯಾಕ್ಟರಿ ಬೆಲೆಯ ಶೇ. 15ಕ್ಕೆ ಮಿತಿಗೊಳಿಸಲಾಗಿದೆ. ಈವರೆಗೆ ಈ ಮಿತಿ ಶೇ. 40ರಷ್ಟು ಇತ್ತು.

ಈ ತಿಂಗಳ ಆರಂಭದಲ್ಲಿ 24 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರೊಂದಿಗೆ ಸರ್ಕಾರದ ಪ್ರತಿನಿಧಿಗಳು ನಡೆಸಿದ ಸಭೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಸರ್ಕಾರದ ಪ್ರಕಾರ ಫೇಮ್‌ 2 ಯೋಜನೆಯು ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ವಾಹನ ಖರೀದಿಸಲು ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು, ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳ ವಿಭಾಗಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಗಾಗಿ ಮಾತ್ರ ಲಭ್ಯವಿದೆ.

ಆದರೆ ಇದೀಗ ಸರ್ಕಾರದ ಸಬ್ಸಿಡಿ ಕಡಿತ ನಿರ್ಧಾರಕ್ಕೆ ಸೊಸೈಟಿ ಆಫ್ ಮ್ಯಾನುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್‌ಎಂಇವಿ) ಕಟುವಾಗಿ ಪ್ರತಿಕ್ರಿಯಿಸಿದೆ. ಸಬ್ಸಿಡಿಯ ಹಠಾತ್ ಕಡಿತವು ಎಲೆಕ್ಟ್ರಿಕ್‌ ವಾಹನಗಳ ಖರೀದಿ ದೊಡ್ಡ ಮಟ್ಟಕ್ಕೆ ಕುಸಿತವಾಗಲು ಕಾರಣವಾಗಬಹುದು. ಇದು ಇಡೀ ಉದ್ಯಮದ ಮೇಲೆ ಸಾಕಷ್ಟು ಸಮಯದವರೆಗೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

“ಭಾರತೀಯ ಮಾರುಕಟ್ಟೆಯು ಬೆಲೆ ಸೂಕ್ಷ್ಮವಾಗಿದ್ದು, ವಾಹನದ ನೈಜ ಬೆಲೆಯು ಗ್ರಾಹಕರಿಗೆ ತಿಳಿದಿಲ್ಲ,” ಎಂದು ಎಸ್‌ಎಂಇವಿ ಡೈರೆಕ್ಟರ್ ಜನರಲ್ ಸೋಹಿಂದರ್ ಗಿಲ್ ಕಳೆದ ವಾರ ಹೇಳಿದ್ದರು. ಬಹುಪಾಲು ಪೆಟ್ರೋಲ್ ದ್ವಿಚಕ್ರ ವಾಹನಗಳು 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿದ್ದು, ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗಾಗಿ 1.5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವ ಸಾಧ್ಯತೆಗಳು ಕಡಿಮೆ ಎಂದು ಸೋಹಿಂದರ್‌ ಗಿಲ್ ಅಂದಾಜಿಸಿದ್ದಾರೆ.
ಆದಾಗ್ಯೂ ಸ್ಟಾರ್ಟಪ್‌ಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ತಮ್ಮ ಸ್ವಂತ ಬಲದ ಮೇಲೆ ಎದ್ದು ನಿಲ್ಲಲು ಇದು ಉತ್ತಮ ಸಮಯ ಎಂದು ಹೇಳಿವೆ.

ಮೂರು ವರ್ಷಗಳ ಅವಧಿಯ ಫೇಮ್‌ 2 ಯೋಜನೆಯು ಏಪ್ರಿಲ್ 1, 2019 ರಿಂದ ಪ್ರಾರಂಭವಾಗಿತ್ತು ಮತ್ತು ಈ ಯೋಜನೆ ಅಡಿಯಲ್ಲಿ ಸರ್ಕಾರವು 10,000 ಕೋಟಿ ರೂ. ಮೊತ್ತವನ್ನು ಮೀಸಲಿಟ್ಟಿತ್ತು. ಜೂನ್ 2021ರಲ್ಲಿ ಇದನ್ನು ಎರಡು ವರ್ಷಗಳ ಕಾಲ ವಿಸ್ತರಿಸಲಾಗಿತ್ತು. ಈ ವೇಳೆ ಸಬ್ಸಿಡಿ ಯೋಜನೆಯ ಪರಿಣಾಮಕಾರಿ ಅವಧಿಯನ್ನು ಮಾರ್ಚ್‌ 31, 2024ರವರೆಗೆ ವಿಸ್ತರಿಸಲಾಗಿತ್ತು.
ಸರ್ಕಾರವು ಮಾರ್ಚ್ 2024ರ ನಂತರ ಸಬ್ಸಿಡಿಯನ್ನು ವಿಸ್ತರಿಸುವ ಅಥವಾ ಫೇಮ್‌ನ ಮೂರನೇ ಹಂತವನ್ನು ಪ್ರಾರಂಭಿಸಲು ಯೋಜನೆಯನ್ನು ಹೊಂದಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ