Mysore
19
broken clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

8 ಲಕ್ಷ ರೂ ಮೌಲ್ಯದ 2,000ರ 400 ನೋಟುಗಳು ದೇವಸ್ಥಾನದ ಹುಂಡಿಯಲ್ಲಿ ಪತ್ತೆ

ಶಿಮ್ಲಾ : 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿರ್ಧಾರ ಸಂಚಲನ ಉಂಟುಮಾಡಿದೆ. ಬಹುತೇಕ ಸಾಮಾನ್ಯ ಜನರ ಬಳಿ ಈ ನೋಟುಗಳಿಲ್ಲ. ಇದ್ದರೂ ಅವುಗಳನ್ನು ವಿನಿಮಯ ಮಾಡಲು ಅಥವಾ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲು ಸಾಕಷ್ಟು ಸಮಯ ನೀಡಲಾಗಿದೆ. ಆದರೆ ಕಾಳಧನ ಹೊಂದಿರುವವರಲ್ಲಿ ಇದು ಕೊಂಚ ಭಯ ಮೂಡಿಸಿರಬಹುದು. ತಮ್ಮ ಬಳಿ ಇರುವ ಹಣವನ್ನು ಖಾಲಿ ಮಾಡಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಈ ನಡುವೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾ ದೇವಿ ಮಾತೆ ದೇವಸ್ಥಾನದಲ್ಲಿ 8 ಲಕ್ಷ ರೂ ಬೆಲೆಬಾಳುವ 2,000 ರೂ ಮೌಲ್ಯದ 400 ಕರೆನ್ಸಿ ನೋಟುಗಳನ್ನು ಕಾಣಿಕೆ ಹುಂಡಿಯಲ್ಲಿ ಯಾರೋ ಹಾಕಿರುವುದು ಪತ್ತೆಯಾಗಿದೆ. 2 ಸಾವಿರ ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಆರ್‌ಬಿಐ ಸುತ್ತೋಲೆ ಜಾರಿಯಾದ ಕೆಲವೇ ದಿನಗಳಲ್ಲಿ ಹುಂಡಿಯಲ್ಲಿ ಇಷ್ಟು ನೋಟುಗಳು ಪತ್ತೆಯಾಗಿವೆ. ಸೋಮವಾರದಿಂದ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಲು ಅಥವಾ ಖಾತೆಗಳಿಗೆ ಜಮೆ ಮಾಡಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಸಮಯ ಕೊಡಲಾಗಿದೆ.

ಆದರೆ ದೇವಸ್ಥಾನದ ಸಂಕೀರ್ಣದಲ್ಲಿರುವ ಕಾಣಿಕೆ ಹುಂಡಿಯಲ್ಲಿ ಅನಾಮಧೇಯ ವ್ಯಕ್ತಿಗಳು 2 ಸಾವಿರ ರೂದ 400 ನೋಟುಗಳ ಕಂತೆಗಳನ್ನು ತುಂಬಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ತಲಾ 100 ನೋಟುಗಳನ್ನು ಹೊಂದಿರುವ ಒಟ್ಟು ನಾಲ್ಕು ಕಂತೆಗಳನ್ನು ಹುಂಡಿಗೆ ತುಂಬಿಸಲಾಗಿದೆ. ಹೀಗಾಗಿ ಒಬ್ಬನೇ ವ್ಯಕ್ತಿ ಈ ಕೆಲಸ ಮಾಡಿದ್ದಾನೆ ಎಂದು ಊಹಿಸಲಾಗಿದೆ. ಮೇ 20ರಂದು ದೇವಸ್ಥಾನದಲ್ಲಿ ಮುಖ್ಯ ಪೂಜೆ ನೆರವೇರಿಸಲಾಗಿತ್ತು. ಮೇ 21ರಂದು ದೇವಾಲಯದ ಅಧಿಕಾರಿಗಳು ಕಾಣಿಕೆ ಹಣ ಎಣಿಸುವ ಸಂದರ್ಭದಲ್ಲಿ ಹಣದ ಕಂತೆಗಳು ದೊರಕಿವೆ ಎಂದು ಜ್ವಾಲಾಜಿ ದೇವಸ್ಥಾನ ಟ್ರಸ್ಟ್‌ನ ಸದಸ್ಯ ಹಾಗೂ ಅರ್ಚಕ ಕಪಿಲ್ ಶರ್ಮಾ ತಿಳಿಸಿದ್ದಾರೆ. ದೇವಸ್ಥಾನಕ್ಕೆ ನಿತ್ಯ ನೂರಾರು ಮಂದಿ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಇದನ್ನು ಯಾರು ಹಾಕಿದವರು ಎಂದು ಪತ್ತೆ ಮಾಡುವುದು ಕಷ್ಟ. ದೇಣಿಗೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಒಟ್ಟಾರೆ ಹಣವನ್ನು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಸವಲತ್ತುಗಳನ್ನು ಸುಧಾರಿಸುವ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನದ ಕಿರಿಯ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆದರೆ ದೇವಸ್ಥಾನದಲ್ಲಿ 2 ಸಾವಿರ ನೋಟುಗಳ ಕಂತೆ ಕಾಣಿಕೆ ರೂಪದಲ್ಲಿ ದೊರಕಿರುವುದರ ಬಗ್ಗೆ ತಮಗೆ ಮಾಹಿತಿ ಬಂದಿಲ್ಲ ಎಂದು ಕಂಗ್ರಾದ ಜಿಲ್ಲಾಧಿಕಾರಿ ನಿಪುಣ್ ಜಿಂದಾಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೇವಸ್ಥಾನದ ಹುಂಡಿಗೆ ಒಟ್ಟು 11.32 ಲಕ್ಷ ರೂ ನಗದು ಹಾಗೂ 770 ಗ್ರಾಂ ಬೆಳ್ಳಿಯನ್ನು ಭಕ್ತರು ದೇಣಿಗೆಯಾಗಿ ನೀಡಿದ್ದಾರೆ. ಇದರಲ್ಲಿ 2 ಸಾವಿರ ರೂ ಮುಖಬೆಲೆಯ ನಾಲ್ಕು ಕಂತೆಗಳಲ್ಲಿನ 8 ಲಕ್ಷ ರೂ, 500 ರೂ ಮುಖಬೆಲೆಯ 2.2 ಲಕ್ಷ ರೂ , 200 ರೂ ಮುಖಬೆಲೆಯ 27,000 ರೂ ಹಾಗೂ 100 ರೂ ಮುಖಬೆಲೆಯ 1.3 ಲಕ್ಷ ರೂ ನಗದು ಸೇರಿದೆ. ಉಳಿದ ಹಣವು ಕಡಿಮೆ ಮೌಲ್ಯದ ಕರೆನ್ಸಿಯದ್ದಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ