ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೋಖಾ (Mocha) ಚಂಡಮಾರುತ ಅತ್ಯಂತ ತೀವ್ರ ಸ್ವರೂಪ (Very Severe Cyclonic Storm) ತಾಳಿದ್ದು, ಮುಂಜಾಗ್ರತಾ ಕ್ರಮವಾಗಿ ಬಂಗಾಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್‌ನಿಂದ 520 ಕಿ.ಮೀ. ದೂರದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಖಾ ಚಂಡಮಾರುತ ಇಂದು ಬೆಳಿಗ್ಗೆ (ಶುಕ್ರವಾರ) 5.30ರ ಸುಮಾರಿಗೆ ತೀವ್ರ ಸ್ವರೂಪದಿಂದ ಅತ್ಯಂತ ತೀವ್ರ ಸ್ವರೂಪ ತಾಳಿರುವುದಾಗಿ ಟ್ವೀಟ್ ಮೂಲಕ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ಬಂಗಾಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಾರತದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪ್ರಭಾವ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ದೀಘಾದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಎಂಟು ತಂಡಗಳಲ್ಲಾಗಿ 200 ಸಿಬ್ಬಂದಿ ನಿಯೋಜಿಸಿದೆ. ಭಾನುವಾರದವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದೆ.
The SCS “Mocha" intensified into a Very Severe Cyclonic Storm, lay centered at 0530 hours IST of 12th May 2023 over Central adjoining Southeast Bay of Bengal near lat 13.2N & long 88.1E, about 520 km west-northwest of Port Blair. pic.twitter.com/RpysOvzvew
— India Meteorological Department (@Indiametdept) May 12, 2023
ಚಂಡಮಾರುತದ ಹಿನ್ನೆಲೆಯಲ್ಲಿ ಭಾರಿ ಗಾಳಿ, ಮಳೆಯಾಗುವ ಸಾಧ್ಯತೆಯಿದೆ. ಮೋಖಾ ಚಂಡಮಾರುತ ಮೇ 14ರ ವೇಳೆಗೆ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹವಾಮಾನ ವೈಪರೀತ್ಯದಿಂದಾಗಿ ಶನಿವಾರದಂದು ತ್ರಿಪುರಾ ಮತ್ತು ಮಿಜೋರಾಂನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರದಂದು ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂನಲ್ಲಿ ಮಳೆಯಾಗುವ ಸಾಧ್ಯತೆಯಿದೆ.