Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕನಕಪುರದಿಂದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ : ಅಚ್ಚರಿಯ ಬೆಳವಣಿಗೆಗೆ ಕಾರಣವಾಯಿತು ಡಿ.ಕೆ ಬ್ರದರ್ಸ್‌ ನಡೆ

ಬೆಂಗಳೂರು – ಅಚ್ಚರಿಯ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರದಿಂದ ಸಹೋದರ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಈಗಾಗಲೇ ಕನಕಪುರ ಕ್ಷೇತ್ರದಿಂದ ಏಪ್ರಿಲ್ 17ರಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಡಿ.ಕೆ.ಶಿ ನಾಮಪತ್ರ ಸಲ್ಲಿಸಿದ್ದರು.ವಿವಿಧ ಕಾರಣಗಳು ಹಾಗೂ ಕಾನೂನಿನ ತೊಡಕುಗಳು ಇರುವುದರಿಂದ ಕೊನೆಯ ಕ್ಷಣದಲ್ಲಿ ತಮ್ಮ ಅಭ್ಯರ್ಥಿತನವನ್ನು ಅನರ್ಹಗೊಳಿಸುವ ಸಂಚು ನಡೆದಿದೆ ಎಂಬ ಸುಳಿವು ಅರಿತಿರುವ ಡಿ.ಕೆ.ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದ್ದಾರೆ.

ಏ.17ರಂದು ಡಿ.ಕೆ.ಶಿವಕುಮಾರ್ ಸಾವಿರಾರು ಜನರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ಮೂಲಕ ಕನಕಪುರಕ್ಕೆ ನಾಮಪತ್ರ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಡಿ.ಕೆ.ಸುರೇಶ್ ಅವರ ನಾಮಪತ್ರ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಈ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕಣಕ್ಕಿಳಿದಿದ್ದು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಅಶೋಕ್ ಅವರ ಸ್ವಕ್ಷೇತ್ರ ಪದ್ಮನಾಭನಗರದಲ್ಲಿ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಇದ್ದವು.
ಆರಂಭದಲ್ಲಿ ಅವರನ್ನು ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ಎಂಬ ವದಂತಿಗಳು ಇದ್ದವು. ಆನಂತರ ಪದ್ಮನಾಭನಗರಕ್ಕೆ ಹೆಸರು ಪ್ರಸ್ತಾಪವಾಗಿತ್ತು.

ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರು ಸುದ್ದಿಗಾರ ಜೊತೆ ಮಾತನಾಡಿ, ಸುರೇಶ್ ನಾಮಪತ್ರ ಸಲ್ಲಿಕೆಗೆ ಕುತೂಹಲ ಕಾಯ್ದುಕೊಳ್ಳಲಾಗಿದೆ ಎಂದಿದ್ದರು.ಸುರೇಶ್ ಅವರು ಪ್ರತ್ಯೇಕವಾಗಿ ಮಾತನಾಡಿ, ಯಾವುದೋ ಕ್ಷೇತ್ರಕ್ಕೆ ತಾವು ನಾಮಪತ್ರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದರು. ಆದರೆ ಕೊನೆಯ ಬೆಳವಣಿಗೆಗಳು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಇದರ ಹಿಂದೆ ಡಿ.ಕೆ ಸಹೋದರರ ರಾಜಕೀಯ ಮುನ್ನೆಚ್ಚರಿಕೆ ಅಡಗಿದೆ ಎಂದು ಹೇಳಲಾಗಿದೆ.

ನಾಮಪತ್ರ ಸಲ್ಲಿಸಿದ್ದು ಯಾಕೆ? : ಇಬ್ಬರು ಏಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟವಾದ ಕಾರಣ ಸಿಕ್ಕಿಲ್ಲ. ಒಂದು ವೇಳೆ ಡಿಕೆಶಿ ನಾಮಪತ್ರ ತಿರಸ್ಕೃತವಾದರೂ ಸುರೇಶ್ ಅವರ ನಾಮಪತ್ರ ಸ್ವೀಕೃತವಾಗಿರುತ್ತದೆ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013ರಿಂದ 2018ರ ವರೆಗೆ ಅಕ್ರಮ ಆಸ್ತಿಗಳಿಕೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಇದರಿಂದ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿರುವ ನಾಮಪತ್ರ ಅನೂರ್ಜಿತ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗ ಡಿ.ಕೆ. ಸುರೇಶ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಣ್ಣನ ಅರ್ಜಿ ಅನೂರ್ಜಿತ ಆದರೂ, ತಮ್ಮ ಗೆದ್ದರೆ ವಿಧಾನಸಭೆಗೆ ಬರಲಿದ್ದಾರೆ.

ಈ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ಮಧ್ಯೆ ಮಧ್ಯಂತರ ತಡೆಯನ್ನು ರದ್ದು ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳದ ಹಿನ್ನೆಲೆ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013 ರಿಂದ 2018ರ ವರೆಗೆ ಸುಮಾರು 75 ಕೋಟಿ ರೂಪಾಯಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಎಫ್‍ಐಆರ್‍ ನಲ್ಲಿ ಸಿಬಿಐ ಉಲ್ಲೇಖಿಸಿತ್ತು.

ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ : ಕಳೆದ ಎರಡು ವರ್ಷಗಳಿಂದ ಸಿಬಿಐ ನಡೆಸಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ತನಿಖೆಗೆ ತಡೆ ನೀಡಿರುವುದು ಸುಪ್ರೀಂಕೋರ್ಟ್‍ನ ನಿಯಮಗಳಿಗೆ ವಿರುದ್ಧ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ದಾಖಲಾಗಿದ್ದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ತಡೆ ಸಿಕ್ಕಿದ್ದರಿಂದ ಚುನಾವಣೆ ಹೊತ್ತಲ್ಲಿ ಡಿ.ಕೆ.ಶಿವಕುಮಾರ್‍ ಗೆ ದೊಡ್ಡ ರಿಲೀಫ್ ಸಿಕ್ಕಿತ್ತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ