ಬೆಂಗಳೂರು : ಇನ್ಫೊಸಿಸ್ ಕಂಪನಿಯ ನಿವ್ವಳ ಲಾಭವು 2022–23ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಹೆಚ್ಚಾಗಿ ₹6,128 ಕೋಟಿಗೆ ತಲುಪಿದೆ.
ಕಂಪನಿಯ ವರಮಾನವು ಮಾರ್ಚ್ ತ್ರೈಮಾಸಿಕದಲ್ಲಿ ಶೇ 16ರಷ್ಟು ವೃದ್ಧಿಯಾಗಿದ್ದು ₹37,441 ಕೋಟಿಗೆ ಏರಿಕೆ ಆಗಿದೆ. 2022–23ನೇ ಹಣಕಾಸು ವರ್ಷಕ್ಕೆ ನಿವ್ವಳ ಲಾಭ ಶೇ 9ರಷ್ಟು ಹೆಚ್ಚಾಗಿ ₹24,095 ಕೋಟಿಗೆ ತಲುಪಿದೆ. ವರಮಾನವು ಶೇ 20.7ರಷ್ಟು ಏರಿಕೆ ಕಂಡು ₹1.46 ಲಕ್ಷ ಕೋಟಿಗೆ ಏರಿಕೆ ಆಗಿದೆ.ಜಾಗತಿಕ ಆರ್ಥಿಕ ಅನಿಶ್ಚಿತತೆಯ ಕಾರಣದಿಂದಾಗಿ 2023-24ನೇ ಹಣಕಾಸು ವರ್ಷಕ್ಕೆ ಕಂಪನಿಯ ವರಮಾನವು ಶೇ 4–7ರ ಮಟ್ಟದಲ್ಲಿ ಬೆಳವಣಿಗೆ ಕಾಣುವ ಅಂದಾಜನ್ನು ಕಂಪನಿ ಮಾಡಿದೆ.ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಹಣಕಾಸು ವ್ಯವಸ್ಥೆಯಲ್ಲಿನ ಕುಸಿತದಿಂದಾಗಿ ಇನ್ಫೊಸಿಸ್‌ನ ವರಮಾನವು ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
2023-24ನೇ ಹಣಕಾಸು ವರ್ಷಕ್ಕೆ ವರಮಾನ ಬೆಳವಣಿಗೆಯ ಕುರಿತು ಕಂಪನಿ ಮಾಡಿರುವ ಅಂದಾಜು ಸಹ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗಿಂತಲೂ ಕಡಿಮೆ ಎಂದು ರಾಯಿಟರ್ಸ್ ಹೇಳಿದೆ.2022-23ನೇ ಹಣಕಾಸು ವರ್ಷದ ಉತ್ತಮ ಫಲಿತಾಂಶವು ಡಿಜಿಟಿಲ್, ಕ್ಲೌಡ್ ಮತ್ತು ಆಟೊಮೇಷನ್ ಸಾಮರ್ಥ್ಯದ ಕಡೆಗೆ ಗಮನ ಮುಂದುವರಿಸಿರುವುದನ್ನು ಸೂಚಿಸುತ್ತಿದೆ ಎಂದು ಕಂಪನಿಯ ಸಿಇಒ ಸಲೀಲ್ ಪಾರೇಖ್ ಹೇಳಿದರು.ಕಂಪನಿ ಬಿಟ್ಟು ಹೋಗುತ್ತಿರುವವ ಪ್ರಮಾಣವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 24.3ರಷ್ಟು ಇದ್ದಿದ್ದು ಮಾರ್ಚ್ ತ್ರೈಮಾಸಿಕದಲ್ಲಿ ಶೇ 20.9ಕ್ಕೆ ಇಳಿಕೆ ಆಗಿದೆ.