Mysore
20
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಉಪನ್ಯಾಸಕರಿಗೂ NPS ಪಿಂಚಣಿ : ಸಿಎಂ ಭರವಸೆ

ಬೆಂಗಳೂರು- ಕಾಲೇಜು ಶಿಕ್ಷಣ ಇಲಾಖೆಯ ಖಾಸಗಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರು, ಅರೆಕಾಲಿಕ ಉಪನ್ಯಾಸಕರಿಗೆ ಎನ್‍ಪಿಎಸ್ ಪಿಂಚಣಿ ಯೋಜನೆ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆ ಕೇಳಿ, ಅನುದಾನಿತ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು ಎನ್‍ಪಿಎಸ್ ಸೌಲಭ್ಯಕ್ಕಾಗಿ 138 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ನಿನ್ನೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಅವರಿಗೆ ಪಿಂಚಣಿ ನೀಡುವ ಭರವಸೆ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಮುಷ್ಕರ ನಿರತರ ಜತೆಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು.
ಉತ್ತರ ನೀಡಿದ ಮುಖ್ಯಮಂತ್ರಿಯವರು, 2006ರ ಏಪ್ರಿಲ್ 1ರ ಪೂರ್ವದಲ್ಲಿ ನೇಮಕವಾದವರಿಗೆ ಹಳೆ ಪಿಂಚಣಿ ಯೋಜನೆ ಜಾರಿಯಾಗಿರುತ್ತದೆ. ಅನಂತರ ನೇಮಕವಾದವರಿಗೆ ಆಡಳಿತ ಮಂಡಳಿಯ ಪಾಲು ಶೇ.14ರಷ್ಟು, ಉಪನ್ಯಾಸಕರ ಪಾಲು ಶೇ.10ರಷ್ಟು ಸೇರಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿಯಮ ಇದೆ. ಆದರೆ, ಇದು ಬಹಳಷ್ಟು ಕಡೆ ಇದು ಅನ್ವಯವಾಗಿಲ್ಲ. ಇನ್ನು ಮುಂದೆ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಆಡಳಿತ ಮಂಡಳಿ ತನ್ನ ಪಾಲಿನ ಹಣ ಭರ್ತಿ ಮಾಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಸದಸ್ಯ ಆಯನೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದಾಗ, ನಿಯಮದಲ್ಲಿ ಆಡಳಿತ ಮಂಡಳಿ ತನ್ನ ಪಾಲನ್ನು ಭರ್ತಿ ಮಾಡಬೇಕು ಎಂಬುದು ಸ್ಪಷ್ಟವಾಗಿದೆ. ಸರ್ಕಾರ ಇದಕ್ಕಾಗಿ ಸ್ಪಷ್ಟ ಸುತ್ತೋಲೆಯನ್ನೂ ಹೊರಡಿಸಲಿದೆ. 2005ರಲ್ಲಿ ನೇಮಕವಾಗಿ 2006ರಲ್ಲಿ ಸೇವೆಗೆ ಸೇರಿದವರಿಗೆ ಮತ್ತು 2006ರ ನಂತರ ಅನುದಾನಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ನಿಯಮಾನುಸಾರ ಪಿಂಚಣಿ ನೀಡುವ ಮೂಲಕ ಗೊಂದಲಗಳನ್ನು ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರು.
ಇದನ್ನು ಭರವಸೆ ಎಂದೇ ಭಾವಿಸಬಹುದೆ. ಮುಷ್ಕರ ಅಂತ್ಯಗೊಳಿಸಲು ಸಹಾಯಕವಾಗುವುದೇ ಎಂದು ಮಂಜುನಾಥ್ ಉಪ ಪ್ರಶ್ನೆ ಕೇಳಿದಾಗ, ನಾವು ನಮ್ಮ ಪಾಲಿನ ಭರವಸೆಗಳನ್ನು ನೀಡಿದ್ದೇವೆ. ಸದಸ್ಯರು ಮುಷ್ಕರ ನಿರತರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡಬೇಕಂದು ಸಿಎಂ ಸಲಹೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ