Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮೈಸೂರಿನಲ್ಲಿ ಮತ್ತೆ ಎರಡು ಚಿರತೆ ಬೋನಿಗೆ

ಮೈಸೂರಿನ ಮರಶೆ ಗ್ರಾಮ, ಹುಣಸೂರಿನ ಹೆಬ್ಬನಕುಪ್ಪೆ ಗ್ರಾಮದಲ್ಲಿ ಎರಡು ಚಿರತೆಗಳು ಬೋನಿಗೆ

ಮೈಸೂರು: ಜಿಲ್ಲೆಯಲ್ಲಿ ಮತ್ತೆ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ವರುಣಾ ಹೋಬಳಿಗೆ ಸೇರಿದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮರಶೆ ಗ್ರಾಮದಲ್ಲಿ ನಾಲ್ಕು ವರ್ಷದ ಚಿರತೆಯೊಂದು ಬೋನಿಗೆ ಬಿದ್ದಿದೆ.

ವಾರದ ಹಿಂದೆ ಇಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ ಎಂಬವರ ಜಮೀನಿನಲ್ಲಿ ಅರಣ್ಯ ಸಿಬ್ಬಂದಿ ಬೋನು ಇಟ್ಟಿದ್ದರು. ಭಾನುವಾರ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಆರ್ ಎಫ್ ಓ ಸುರೇಂದ್ರ, ಡಿಆರ್‌ಎಫ್ಓ ವಿಜಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯಲಾಗಿದ್ದು, ಚಿಪ್‌ ಅಳವಡಿಸಿದ ಬಳಿಕ ಅರಣ್ಯಕ್ಕೆ ಬಿಡಲಾಗಿದೆ ಎಂದು ಮೈಸೂರು ಡಿಸಿಎಫ್ ಡಾ.ಕೆ.ಎನ್.ಬಸವರಾಜು ತಿಳಿಸಿದ್ದಾರೆ.
ಇದೇ ವೇಳೆ ಹುಣಸೂರು ತಾಲ್ಲೂಕಿನ ಹೆಬ್ಬನಕುಪ್ಪೆ ಗ್ರಾಮದಲ್ಲಿ 15 ದಿನಗಳ ಅಂತರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಶುಕ್ರವಾರ ರಾತ್ರಿ ಸುಮಾರು 4 ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಫೆ.16ರ ಗುರುವಾರ ಹಬ್ಬನಕುಪ್ಪೆ ನಾಗರಾಜಗೌಡರ ಜಮೀನಿನ ಮನೆ ಬಳಿ ಚಿರತೆ ಕರುವೊಂದನ್ನು ತಿಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಚಿರತೆ ಸೆರೆಗೆ ಬೋನು ಇಡಲಾಗಿತ್ತು. ಕರುವಿನ ಮಾಂಸವನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಸೆರೆಯಾದ ಚಿರತೆಯನ್ನು ಆರ್‌ ಎಫ್ ಓ ನಂದಕುಮಾರ್ ನೇತೃತ್ವದ ತಂಡವು ಬಂಡೀಪುರದ ಮೂಲೆ ಹೊಳೆ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದೆ ಎಂದು ಡಿಸಿಎಫ್ ಸೀಮಾ ತಿಳಿಸಿದ್ದಾರೆ. ಇದೇ ಗ್ರಾಮದ ಲೋಕೇಶ್ ಎಂಬವರ ಜಮೀನಿನಲ್ಲಿ 15 ದಿನಗಳ ಹಿಂದೆ ನಾಲ್ಕು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.
ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 65ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ತಿ. ನರಸೀಪುರ ಮತ್ತು ಹುಣಸೂರು ಭಾಗದಲ್ಲಿ ಅತಿ ಹೆಚ್ಚು ಚಿರತೆಗಳು ಸೆರೆಯಾಗಿವೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!