ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಶಾಸಕ ಬಾನೋತ್ ಶಂಕರ್ ನಾಯ್ಕ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಅವರನ್ನು ಮಹಬುಬಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶರ್ಮಿಳಾ ಅವರ ಪಾದಯಾತ್ರೆ ತಡೆದು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿ ಹೇಳಿದೆ. ಶಾಸಕ ಶಂಕರ್ ನಾಯ್ಕ್ ಅವರು ಭೂಕಬಳಿಕೆ ಹಾಗೂ ದರೋಡೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶರ್ಮಿಳಾ ಈ ಹಿಂದೆ ಶಾಸಕರ ವಿರುದ್ಧ ಆರೋಪ ಮಾಡಿದಲ್ಲದೇ ನಿಂದಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ ಬಿಆರ್‌ಎಸ್ ಮಂಡಲ ಕಾರ್ಯಾಧ್ಯಕ್ಷ ಲುನಾವತ್ ಅಶೋಕ್ ಅವರು ಶರ್ಮಿಳಾ ವಿರುದ್ಧ ದೂರಿದ್ದಾರೆ.
ಪಾದಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರ ಶಾಂತಿ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗಿದ್ದು, ಸ್ಥಳೀಯ ಶಾಸಕರನ್ನು ವೈಯಕ್ತಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರುಗಳು ಬಂದಿದ್ದವು ಎಂದು ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ಹೇಳಿದ್ದಾರೆ.