ಬೆಂಗಳೂರು: ಮಹಿಳಾ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ(ಡಬ್ಲ್ಯುಪಿಎಲ್) ಚೊಚ್ಚಲ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡದ ನಾಯಕಿಯಾಗಿ ಸ್ಮೃತಿ ಮಂದಾನಾ ಅವರನ್ನು ನೇಮಕ ಮಾಡಲಾಗಿದೆ.
ಭಾರತ ಮಹಿಳೆಯರ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದಾನಾ, ಇತ್ತೀಚೆಗೆ ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ₹3.40 ಕೋಟಿಗೆ ಆರ್‌ಸಿಬಿ ತಂಡ ಸೇರಿದ್ದರು.
ಫ್ರಾಂಚೈಸಿಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊ ಸಂದೇಶದ ಮೂಲಕ ಈ ಘೋಷಣೆ ಮಾಡಲಾಗಿದೆ. ಆರ್‌ಸಿಬಿಯ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪುರುಷರ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸಂದೇಶ ನೀಡಿದ್ದಾರೆ.
‘ಡಬ್ಲ್ಯುಪಿಎಲ್‌ನಲ್ಲಿ ಅತ್ಯಂತ ವಿಶೇಷ ಆರ್‌ಸಿಬಿ ತಂಡವನ್ನು ಮತ್ತೊಂದು ನಂ 18 ಮುನ್ನಡೆಸುವ ಸಮಯವಿದು. ಹೌದು, ನಾವು ಮಾತನಾಡುತ್ತಿರುವುದು ಸ್ಮೃತಿ ಮಂದಾನಾ ಅವರ ಬಗ್ಗೆ. ಗೋ ಆನ್ ಸ್ಮೃತಿ ಮಂದಾನಾ. ನಿಮಗೆ ಜಗತ್ತಿನ ಅತ್ಯುತ್ತಮ ತಂಡ ಮತ್ತು ಅತ್ಯುತ್ತಮ ಅಭಿಮಾನಿಗಳ ಬೆಂಬಲವಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆರ್‌ಸಿಬಿ ಚೇರ್ಮನ್ ಪ್ರತ್ಮೇಶ್ ಮಿಶ್ರಾ ಅವರು, ‘ಸ್ಮೃತಿ ಅವರಿಗೆ ನಾವು ನಾಯಕತ್ವದ ಹೊಣೆ ನೀಡಿದ್ದೇವೆ. ಆರ್‌ಸಿಬಿಯನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.





