ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವವಾಡಿದೆ. ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ. 7.8 ತೀವ್ರತೆಯ ಭೂಕಂಪನದಲ್ಲಿ 360 ಕ್ಕೂ ಅಧಿಕ ಜನರು ಈವರೆಗೂ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಕಟ್ಟಡಗಳು ಧರಾಶಾಯಿಯಾಗಿದ್ದು, ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಭೀಕರ ದುರಂತದ ದೃಶ್ಯಟರ್ಕಿ, ಸಿರಿಯಾ ಮಾತ್ರವಲ್ಲದೇ, ಈಜಿಪ್ಟ್ನ ಕೈರೋದವರೆಗೂ ಭೂಕಂಪನ ಅನುಭವವಾಗಿದೆ. ಭೂಮಿ ನಡುಕದಿಂದ ದೊಡ್ಡ ದೊಡ್ಡ ಕಟ್ಟಡಗಳು ಉರುಳಿಬಿದ್ದಿವೆ. ಅದರಡಿ ಸಿಲುಕಿದ ಜನರು ಕೂಗಾಟ, ಚೀರಾಟ ಕರುಳು ಹಿಂಡುತ್ತಿದೆ. ಇನ್ನಷ್ಟು ಕಟ್ಟಡಗಳು ಅಪಾಯಕಾರಿ ಮಟ್ಟದಲ್ಲಿ ವಾಲಿಕೊಂಡಿದ್ದು, ಬೀಳುವ ಹಂತದಲ್ಲಿವೆ. ಸಿರಿಯಾದ ರಾಜಧಾನಿಯಿಂದ ಸುಮಾರು 90 ಕಿಲೋಮೀಟರ್ ದೂರವಿರುವ ಗಾಜಿಯಾಂಟೆಪ್ ನಗರದ ಉತ್ತರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ.
ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳುಇದು ಸುತ್ತಲಿನ 30 ಕಿಮೀ ವ್ಯಾಪ್ತಿಯಲ್ಲಿ ನಡುಕ ಉಂಟು ಮಾಡಿದೆ. ಹಲವಾರು ನಗರಗಳ ಜೊತೆಗೆ ಸಿರಿಯಾ ಯುದ್ಧದಲ್ಲಿ ವಲಸೆ ಬಂದು ನೆಲೆಸಿರುವ ನಿರಾಶ್ರಿತ ಪ್ರದೇಶದಲ್ಲೂ ಪ್ರಕೃತಿ ಮುನಿಸಿಕೊಂಡು ವೈಪರೀತ್ಯ ಸೃಷ್ಟಿಸಿದೆ. ಸಿರಿಯಾದ ಗಡಿಯಲ್ಲಿರುವ ಟರ್ಕಿ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸಿರಿಯನ್ ನಿರಾಶ್ರಿತರನ್ನು ಹೊಂದಿದೆ.





