1974, ಅಂದು ಗಾಂಧಿ ಇಂದು ಜೆಪಿ ಸ್ಲೋಗನ್ ಶುರುವಾದೊಡನೆ ರಾಜ್ಯದಲ್ಲಿ ನವ ನಿರ್ಮಾಣ ಸಮಿತಿ ಚಟುವಟಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. 1974ರ ಆಗಸ್ಟ್ 15ರಂದು ನಾನಾ ಕಡೆಗಳಲ್ಲಿ ನಡೆದ ಮೌನ ಮೆರವಣಿಗೆ ಆ ಕಾಲಕ್ಕೇ ದೊಡ್ಡ ಪ್ರಯೋಗವಾಗಿತ್ತು. ಲೋಕ ನಾಯಕ ಜಯಪ್ರಕಾಶ್ ನಾರಾಯಣರು ಸಾಮಾಜಿಕ ನ್ಯಾಯಕ್ಕಾಗಿ ಮತ್ತು ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ 1974ರ ಮಾರ್ಚ್ ನಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದ್ದರು. ರಾಷ್ಟ್ರದ ನಾನಾ ಕಡೆಗಳಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಕರ್ನಾಟಕದಲ್ಲಿ ಒಕ್ಕೂಟದ ಬರಹಗಾರರದೇ ನವ ನಿರ್ಮಾಣದ ಹೋರಾಟದ ಚುಕ್ಕಾಣಿ. ಪ್ರೊ.ಎಂಡಿಎನ್‌ರ ನೇತೃತ್ವ. ಡಾ.ಜಿ.ಎಸ್.ಶಿವರುದ್ರಪ್ಪ, ತೇಜಸ್ವಿ, ಪಿ.ಲಂಕೇಶ್, ಚಂಪಾ ಹೀಗೆ ಹಿರಿಯ, ಕಿರಿಯ ಕವಿಗಳು ಸೇರಿದ್ದರು. ವಿಚಾರ ಕ್ರಾಂತಿಗೆ ಆಹ್ವಾನ ಎಂದು ಬರಹಗಾರರ ಈ ಒಕ್ಕೂಟವನ್ನು ಉದ್ಘಾಟಿಸಿದ್ದವರು ಕುವೆಂಪು.
ನವ ನಿರ್ಮಾಣ ಸಮಿತಿಯ ಮೊತ್ತ ಮೊದಲ ಸಾರ್ವಜನಿಕ ದೊಡ್ಡ ಸಭೆಯನ್ನು ಹಾಸನದಲ್ಲಿ ನಡೆಸುವುದೆಂದಾಯಿತು. ಡಾ.ಎ.ಸಿ.ಮುನಿ ವೆಂಕಟೇಗೌಡರ ಮುಂದಾಳತ್ವದಲ್ಲಿ ನಾವುಗಳು ಜವಾಬ್ದಾರಿ ತೆಗೆದು ಕೊಂಡೆವು.
ಹಾಸನದ ನಡು ಭಾಗದಲ್ಲಿದ್ದ ಕಟ್ಟಿನ ಕೆರೆ ಪ್ರದೇಶವನ್ನು ನೆಲಸಮ ಮಾಡಿ ಆಗಿನ್ನೂ ದೊಡ್ಡ ಮೈದಾನ ಮಾಡಿದ್ದರು. ಮಾಮೂಲಿ ಫಂಕ್ಷನ್ ನಡೆಸುವ ಗಣಪತಿ ಪೆಂಡಾಲನ್ನೇ ಪ್ರವೇಶ ದ್ವಾರ ಮಾಡಿ ಹತ್ತು ಸಾವಿರ ಜನ ಸೇರಿಸುವ ಆಸೆ ನಮ್ಮೆಲ್ಲರದು. ಆಗೆಲ್ಲ ಕುರ್ಚಿ, ಪೆಂಡಾಲ್ ಸಂಸ್ಕ ತಿ ಇರಲಿಲ್ಲ. 200 ಕುರ್ಚಿ ಹಾಕಿಸಿದರೆ ಸಾಕು ಉಳಿದ ಜನ ನಿಂತೋ, ಕುಂತೋ ಸಭೆ ನೋಡುತ್ತಾರೆ ಎಂಬ ಯೋಚನೆ.
ಆಗಿನ ಸಭೆಗಳಿಗೆ ಇನ್ನೂರೋ, ಮುನ್ನೂರೋ ಜನ ಬಂದರೇ ಹೆಚ್ಚು. ಹತ್ತು ಸಾವಿರ ಜನ ನಿಜಕ್ಕೂ ಬರುತ್ತಾರಾ? ಇದು ತೇಜಸ್ವಿಯ ಅನುಮಾನ. ಸರಿ, ಐದಾರು ರಿಕ್ಷಾ ಗೊತ್ತು ಮಾಡಿ, ಮೈಕು ಕಟ್ಟಿಸಿ ಬೀದಿ ಬೀದಿಯಲ್ಲಿ ಪ್ರಚಾರ ಮಾಡಿಸಿದೆವು. ಆರ್.ಸಿ.ಗುಂಡಣ್ಣ, ಮೂರ್ತಿ, ಪಾಂಡು ಮುಂತಾದ ಹುಡುಗರು ಬೆಳಗಿನಿಂದ ರಾತ್ರಿವರೆಗೆ ಮೈಕಿನಲ್ಲಿ ಕ್ರಾಂತಿ ಕಿಡಿ ಉದುರಿಸಿದ್ದೇ ಉದುರಿಸಿದ್ದು. ಜನರ ಕಿವಿ ತೂತು ಮಾಡಿದ್ದೇ ಮಾಡಿದ್ದು.
1974ರ ನವೆಂಬರ್ ನಾಲ್ಕು, ಅಂದಿನ ಸಭೆಯ ಬೆಳಿಗ್ಗೆ ಬೃಹತ್ ಮೌನ ಮೆರವಣಿಗೆಯನ್ನೂ ಆಯೋಜಿಸಿದ್ದೆವು. ಹಾಸನದ ವಿದ್ಯಾರ್ಥಿ ರಾಜುವಿನ ಲಾಕಪ್ ಡೆತ್ ನಡೆದು ವರ್ಷ ಕಳೆದಿತ್ತು. ಅವನ ಸಾವಿಗೆ ನ್ಯಾಯ ಕೇಳಲು ಹೋಗಿ ನೂರಾರು ವಿದ್ಯಾರ್ಥಿಗಳು ರಕ್ತ ಸಿಕ್ತವಾಗಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಬಂಽತರಾಗಿದ್ದರು. ಪೊಲೀಸರ ದೌರ್ಜನ್ಯ, ದಬ್ಬಾಳಿಕೆ ಬಗ್ಗೆ ಕ್ರೋಧ ಹೆಪ್ಪುಗಟ್ಟಿತ್ತು. ಇದರ ಹಿನ್ನೆಲೆಯಲ್ಲಿ ನಡೆಸಿದ ಬೃಹತ್ ಮೌನ ಮೆರವಣಿಗೆ. ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಹಿಂದಕ್ಕೆ ಕೈಕಟ್ಟಿಕೊಂಡು, ಬಟ್ಟೆಯಿಂದ ಬಾಯಿ ಮುಚ್ಚಿಕೊಂಡು ಸಾಲುಗಟ್ಟಿ ಸಾಗಿದ್ದರು. ಅದಂತೂ ಹಾಸನದ ಜನ ಕಂಡು ಕೇಳರಿಯದ ಮೌನ ಮೆರವಣಿಗೆ !
‘ಬಿಗಿ ಬಟ್ಟೆಯಲ್ಲಿ ಅದುಮಿಟ್ಟ ಭುಗಿಲೇಳುವ ಕ್ರಾಂತಿ ಜ್ವಾಲೆ; ಸಿಡಿದೆದ್ದ ಕ್ರಾಂತಿ ಕಿಡಿಗೆ ಮೌನದ ಶೃಂಖಲೆ’! ಎಂಬೆಲ್ಲ ಶೀರ್ಷಿಕೆ ನೀಡಿ ಪತ್ರಿಕೆಗಳು ಮಾರನೇ ದಿನ ಸುದ್ದಿ ಮಾಡಿದ್ದವು. ಸಂಜೆ ಐದು ಗಂಟೆಗಾಗಲೇ ಜನ ಮೆದೆ ಮೆದೆಯಾಗಿ ಸೇರತೊಡಗಿದರು. ಪ್ರತಿಷ್ಠಿತರಿಗಾಗಿ ಇನ್ನೂರು ಕುರ್ಚಿಗಳನ್ನು ಕಾದಿರಿಸಿ ನಾವೆಲ್ಲ ಹುಡುಗರೂ ಕಾವಲಿದ್ದೆವು. ಬಂದ ಜನ ಹುಲ್ಲು ಮೈದಾನದಲ್ಲೇ ಆರಾಮಾಗಿ ಕುಳಿತರು. ಹತ್ತು ಸಾವಿರ ಎಂದು ಊರೆಲ್ಲ ಗಂಟಲು ಹರಿದುಕೊಂಡಿದ್ದರಿಂದ 400-500 ಮಂದಿ ಪೊಲೀಸರೂ ಜಮಾವಣೆಗೊಂಡಿದ್ದರು. ಆವತ್ತೇ ಆಗಲೇ ಕ್ರಾಂತಿ ಸಂಭವಿಸುತ್ತದೇನೋ ಎಂಬ ಹವಾ ಸೃಷ್ಟಿಯಾಗಿತ್ತು.
ನಾನಾ ಜಿಲ್ಲೆಗಳಿಂದ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಬಂದಿಳಿದಿದ್ದರು. ಮೈಸೂರಿನಿಂದ ಕೆ.ರಾಮದಾಸ್, ಪ.ಮಲ್ಲೇಶ್, ರಾಜಶೇಖರ ಕೋಟಿ ಮುಂತಾದ ಅಸಂಖ್ಯರು ಹಾಜರಾದರು. ಸಮಾರಂಭವೇನೋ ಅಭೂತಪೂರ್ವ. ಆದರೆ ನಮ್ಮ ಭಾಷಣಕಾರ ಬ್ಯಾಟ್ಸ್‌ಮನ್‌ಗಳ ಬಗ್ಗೆಯೇ ಆತಂಕ ಕಾಡುತ್ತಿತ್ತು. ತೇಜಸ್ವಿ, ಲಂಕೇಶ್, ಚಂಪಾ, ಸಿದ್ದಲಿಂಗ ಪಟ್ಟಣಶೆಟ್ಟಿ, ಕೆ.ಶಂಕರಪ್ಪ ಮುಖ್ಯ ಭಾಷಣಕಾರರು. ಎಂಡಿಎನ್‌ರದ್ದೇ ಅಧ್ಯಕ್ಷತೆ. ಆದರೆ ಎಲ್ರೂ ಹೇಗೆ ಮಾತಾಡ್ತಾರೋ? ಡಲ್ಲಾಗಿ ಮಾತಾಡಿಬಿಟ್ರೆ? ಈ ಆತಂಕ ನಮ್ಮೆಲ್ಲರದು.
ಸಭೆಗೆ ಮೊದಲು ಎಂಡಿಎನ್ ಟಾಯ್ಲೆಟ್ಟಿಗೆ ಹೋಗಬೇಕೆಂದರು. ಹತ್ತಿರದ ಶಾನ್ ಭಾಗ್ ಹೋಟೆಲಿಗೆ ಕರೆದೊಯ್ದೆ. ಅವರ ಕೈ ಬ್ಯಾಗು ಇತ್ಯಾದಿ ಇಸಿದುಕೊಳ್ಳುವಾಗ ಕೈಗಳು ಥಣ್ಣಗಿದ್ದುದು ಗೊತ್ತಾಯಿತು. ನನಗೂ ಅದೇ ಕಾಯಿಲೆ ಇದ್ದುದರಿಂದ ಪತ್ತೆಯಾಗಿಬಿಟ್ಟಿತು. ಸಭಾಕಂಪನ!
ಪಟ್ಟಣಶೆಟ್ಟಿ ಹೇಗೆ ಮಾತಾಡುತ್ತಾರೋ ಗೊತ್ತಿಲ್ಲ. ತೇಜಸ್ವಿಯದಂತೂ ತೋಪು! ಅದು ನಾಲ್ಕಾರು ಬಾರಿ ಅನುಭವಕ್ಕೆ ಬಂದಿತ್ತು. ಸ್ಟಾರ್‌ಗಳಾದ ಚಂಪಕ್ಕ, ಲಂಕಣ್ಣ, ಶಂಕ್ರಣ್ಣ ಬಂದಿಲ್ಲ. ಇನ್ನೂ ಈವಯ್ಯ ಬೇರೆ ಹೆದರಿ ಟಾಯ್ಲೆಟ್ ಸೇರಿಕೊಂಡಿದ್ದಾರೆ. ಸಭೆ ಎಕ್ಕುಟ್ಟಿ ಹೋಗುತ್ತೆ ಎಂದು ಕಿಡಿಗೇಡಿ ಮನಸ್ಸು ಲೆಕ್ಕ ಹಾಕಿ ಅದುರುತ್ತಿತ್ತು.
ಎಂಡಿಎನ್ ಹೊರಬಂದರು. ಯಾಕೋ ಬೇಜಾರಿನಲ್ಲಿದ್ದಂತೆ, ಮೂಡ್ ಆಫ್ ಆದವರಂತೆ ಇದ್ದರು. ಶಂಕರಪ್ಪ, ಲಂಕೇಶ್, ಚಂಪಾ ಕೊನೇ ಘಳಿಗೆಯಲ್ಲಿ ಕೈ ಕೊಟ್ಟಿದ್ದರು. ಆದರೆ ಧಾರವಾಡದಿಂದ ಬಂದಿದ್ದ ಸಿದ್ದಲಿಂಗ ಪಟ್ಟಣಶೆಟ್ಟರು ಅದ್ಭುತವಾಗಿ, ಸ್ಛೂರ್ತಿದಾಯಕವಾಗಿ ಮಾತಾಡಿದರು. ಅವರ ಮಾತೇ ಕಾವ್ಯ ರಸಧಾರೆಯಂತಿತ್ತು. ಜನ ತನ್ಮಯರಾದರು. ಆವತ್ತು ಅಪರೂಪದ ಅಚ್ಚರಿ ಮೂಡಿಸಿದವರೆಂದರೆ ತೇಜಸ್ವಿ. ಹತ್ತಾರು ಸಾಲುಗಳಿದ್ದ ಎಳೆಯರೇ, ಗೆಳೆಯರೇ ಎಂಬ ಚೀಟಿಯನ್ನು ಓದಿ ವಿವರಿಸಿದರು. ಇಡೀ ಸಭೆ ಗಡಚಿಕ್ಕುವ ಚಪ್ಪಾಳೆ ತಟ್ಟಿತು. ನಂತರದ ದಿನಗಳಲ್ಲಿ ನಾವು ಆ ಚೀಟಿಯನ್ನು ಸಾವಿರಗಟ್ಟಲೇ ಅಚ್ಚು ಹಾಕಿಸಿ ಊರೆಲ್ಲಾ ಹಂಚಿದೆವು. ಆವರೆಗಿನ ಸಭೆ ಅನಿರೀಕ್ಷಿತ ರೀತಿಯಲ್ಲಿ ಯಶಸ್ವಿಯಾಗಿತ್ತು.
ಮುಂದಿನ ಭಾಷಣವೇ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರದು. ಅವರೋ ವಿಹ್ವಲರಾಗಿದ್ದಾರೆ. ಭಾಷಣ ಏನಾಗುತ್ತೋ ಎಂಬ ಆತಂಕ ನವ ನಿರ್ಮಾಣದ ಹುಡುಗರದು.
(ಮುಂದಿನ ವಾರಕ್ಕೆ)