ಹನೂರು : ತಾಲ್ಲೂಕಿನ ದಿನ್ನಳ್ಳಿ-ರಾಮಾಪುರ ಮಾರ್ಗಮಧ್ಯೆ ಬೈಕ್ ಹಾಗೂ ಮಿನಿ ಟೆಂಪೋ ನಡುವೆ ಡಿಕ್ಕಿಯಾದ ಪರಿಣಾಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ದಿನ್ನಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸೋಮಶೇಖರ್ (42) ಅಪಘಾತದಲ್ಲಿ ಗಾಯಗೊಂಡವರು. ಸೋಮಶೇಖರ್ ಅವರು ಬೆಳಿಗ್ಗೆ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೈಕ್‌ನಲ್ಲಿ ರಾಮಾಪುರದ ಕಡೆಗೆ ತೆರಳುತ್ತಿದ್ದರು. 8.30ರ ಸಮಯದಲ್ಲಿ ಕೋಳಿ ಸಾಗಣೆ ಮಾಡುತ್ತಿದ್ದ ಮಿನಿ ಟೆಂಪೋ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸೋಮಶೇಖರ್ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಸಾರ್ವಜನಿಕರು ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.