Mysore
22
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಆಂದೋಲನ ಓದುಗರ ಪತ್ರ: 19 ಗುರುವಾರ 2023

ಕಾಡಾನೆಗಳ ಹಾವಳಿಗೆ ಪರಿಹಾರ ಯಾವಾಗ?

ಎಚ್.ಡಿ.ಕೋಟೆ ಭಾಗವು ಅರಣ್ಯ ಪ್ರದೇಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಇಲ್ಲಿ ಕಾಡು ಪ್ರಾಣಿಗಳು ಕೂಡ ಹೆಚ್ಚಾಗಿ ಕಂಡು ಬರುತ್ತವೆ. ಅದರಲ್ಲೂ ಕಾಡಾನೆಗಳಂತೂ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಇದು ಒಂದೆಡೆ ಸಂತೋಷದ ವಿಚಾರವಾದರೆ, ಮತ್ತೊಂದು ದೃಷ್ಟಿಯಲ್ಲಿ  ಇಲ್ಲಿನ ರೈತರಿಗೆ ತೀರಾ ಸಂಕಷ್ಟ ಎದುರಾಗುವಂತಾಗಿದೆ. ರೈತರ ಬೆಳೆಗಳು ಇನ್ನೇನು ಕೈ ಸೇರುವ ಹಂತದಲ್ಲಿ , ಕಾಡಾನೆಗಳು ದಾಳಿ ನಡೆಸಿ  ತಿಂದು -ತುಳಿದು ನಾಶ ಮಾಡುತ್ತಿವೆ. ಈ ವೇಳೆ ಸಾಕಷ್ಟು ಬಾರಿ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರ ಮೇಲೂ ದಾಳಿ ನಡೆಸಿ ಅವರನ್ನು ಬಲಿಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಸಾಕಷ್ಟು  ಗ್ರಾಮಗಳಲ್ಲಿ ಈ ರೀತಿಯ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ವರ್ಷದ ಹಿಂದೆ ಕಾಡಾನೆಯೊಂದು ದಾಳಿ ನಡೆಸಿ ಕಲ್ಲಂಬಾಳು ಗ್ರಾಮದ ಸುಮಾರು 45 ವರ್ಷದ ಮಹಿಳೆಯನ್ನು ಸಾಯಿಸಿದ್ದು, ಇದಾದ ಕೆಲವು ತಿಂಗಳುಗಳ ಅಂತರದಲ್ಲೇ ಮತ್ತೆರಡು ಕಾಡಾನೆಗಳು ಬೆಳಗಿನ ಜಾವದಲ್ಲೆ ಗ್ರಾಮಕ್ಕೆ ನುಗ್ಗಿ ಡೇರಿಗೆ ಹಾಲುಹಾಕಲು ತೆರಳುತ್ತಿದ್ದ ಓರ್ವ ವೃದ್ಧನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು.  ಅಲ್ಲದೆ ಕಳೆದ ಕೆಲದಿನಗಳಲ್ಲಿ  ಕಲ್ಲಂಬಾಳು ಸೇರಿದಂತೆ ಸರಗೂರಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು ಕಾಣಿಸಿಕೊಂಡು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿವೆ. ಹಾಗಾಗಿ ಈ ಭಾಗದ ಗ್ರಾಮಗಳ ಜನರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ಹಾಗೂ ಬೆಳಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ಓಡಾಡಲು ಸಹಜವಾಗಿ ಭಯಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಬೇಕು ಎಂಬುದು ಈ ಭಾಗದ ಜನರ ಮನವಿಯಾಗಿದೆ.

ಕೆ.ಎಂ.ಅಭಿಷೇಕ್, ಪತ್ರಿಕೋದ್ಯಮ ವಿಭಾಗ,

ಮಹಾರಾಜ ಕಾಲೇಜು, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!