Mysore
19
broken clouds

Social Media

ಭಾನುವಾರ, 11 ಜನವರಿ 2026
Light
Dark

ಮನುಷ್ಯ ಜಗತ್ತಿಗೆ ಬಂದಿರೋದು ಸಂಗ್ರಹಿಸೋದಕ್ಕಲ್ಲ, ಜಗತ್ತು ಅನುಭವಿಸಬೇಕು, ಆ ಬಳಿಕ ಬದುಕೊದದೆ

ಸಿದ್ದೇಶ್ವರ ಸ್ವಾಮೀಜಿ

ಒಂದು ಸಾಗರದ ಮೀನಾ, ಆ ಮೀನು ಒಂದು ಸಲ ಹೀಗಾ ಈಸಾಡಿಕೊಂಡು ಹೊರಟಿರುತ್ತದೆ ಸಮುದ್ರದ ದಂಡೆಯೊಳಗ. ಅವಾಗ, ಕಾಳಿದಾಸನಂತ, ವಾಲ್ಮೀಕಿಯಂತ ಒಬ್ಬ ಕವಿ. ಸುಮ್ಮನೆ ದಂಡಿಯೊಳಗ ಕುತ್ಕೊಂಡು ಸಮುದ್ರದ ವರ್ಣನಾ ಮಾಡ್ತಾ ಇರ್ತಾನಾ. ಆ ವರ್ಣನೆ ಅತ್ಯದ್ಭುತವಾದ ವರ್ಣನೆ. ‘ಏನ ವಿಸ್ತಾರ? ಏನೇನು ಜಲಸಾಗರ’, ಅದನ್ನೆಲ್ಲ ಸುಂದರವಾಗಿ ವರ್ಣಿಸುತ್ತಿರುತ್ತಾನೆ. ಅದನ್ನ ಆ ಮೀನು ಕೇಳ್ತದೆ. ಅವಾಗ ಮೀನಿಗನಿಸುತ್ತದೆ. ‘ಇಂತ ಒಂದು ಸಾಗರವನ್ನು ನೋಡಬೇಕಲ್ಲ ಜೀವನದಲ್ಲಿ. ಹೆಂಗದ? ಏನು ಸಾಗರ? ಎಷ್ಟು ವಿಸ್ತಾರ? ಜೀವನದಾಗ ಒಮ್ಮೆ ಇದನ್ನ ನೋಡಿ ಬಿಡಬೇಕು ಅನಿಸ್ತದ. ಸಾವಿರಾರು ಮೀನುಗಳಿತ್ತು, ಯಾವುದಕ್ಕೂ ಅನಿಸಲಿಲ್ಲ. ಇದಕ್ಕ ಅನುಭವಿಸಬೇಕು ಅನಿಸ್ತದೆ. ‘ನಾನೊಂದು ಕ್ಷಣ ಇದರ ಅನಂತತೆಯನ್ನ ಅನುಭವಿಸಬೇಕು’ ಅಂತ ಆ ಬಳಿಕ ಹುಡುಕಾಡ ಬೇಕು ಅನಿಸ್ತು.

ದಾರಿಯೊಳಗ ಬರ್ತಿದ್ದೋ ಎಲ್ಲಾ ಮೀನುಗಳನ್ನು ಅದ ಕೇಳ್ತಿತ್ತು. ‘ಎಲ್ಲದ ಸಾಗರ, ಸಾಗರ ಅಂತ ಕೇಳಿರೇನು? ಅಂತ ಕೇಳ್ತಿತ್ತು. ಆ ಮೀನುಗಳು ಹೇಳಿತ್ತು, ‘ಏನೋ ಅಂತಾರಪ್ಪ, ಸಾಗರ ಅಂತ ನಾವಿನೇ ಅದನ್ನ ನೋಡಿಲ್ಲ, ಕೇಳಿಲ್ಲ, ಗೊತ್ತಿಲ್ಲ ನಮಗೆ.’

ಇದು ಹುಡುಕಾಡ್ತಾ, ಹುಡುಕಾಡ್ತಾ ಇಡೀ ಸಾಗರವನ್ನ ಸುತ್ತಾಡ್ತಾ ಇತ್ತು. ಅದಾ ಅಂತ ಕೇಳಾರ ಅಷ್ಟೇ, ಗೊತ್ತಿಲ್ಲ. ‘ಏನೋ ಅದ್ಭುತ ಅದೆ. ಯಾರಿಗೂ ಗೊತ್ತಿಲ್ಲ ಅಂದಮ್ಯಾಕೇ ನಾನು ಗೊತ್ತು ಮಾಡ್ಕೊಂಡು ತೀರಬೇಕು ಇದರ‍್ಯಾಗ ವೈಶಿಷ್ಟ್ಯ’ ಅಂತ ಅದಕ್ಕೆ ಅನಿಸ್ತು. ಬಿಡಲಿಲ್ಲ ಹಾಗೇ ತಿರುಗಾಡ್ತು ತಿರುಗಾಡ್ತು. ‘ಇದೊಂದು ಜನ್ಮ ಹೋದರೂ ಚಿಂತಿಲ್ಲ. ನಾನು ಅದನ್ನು ತಿಳಿದುಕೊಂಡು ಅದನ್ನು ಅನುಭವಿಸಬೇಕು. ಆ ಬಳಿಕವೇ ಸಾಯೋದು, ಅಲ್ಲಿಯ ತನಕ ಸಾವಿಲ್ಲ ಅಂತು. ಅದೇ ‘ಛಲ, ತಿಳಿದುಕೊಳ್ಳಬೇಕು ಅನ್ನುವ ಛಲ’.

ಜಗತ್ತನ್ನು ಅನುಭವಿಸಬೇಕೆನ್ನುವ ಛಲ ಇಲ್ಲೇನೂ? ನಮಗೆ ಹೆಂಗ ಹಣ ಗಳಿಸಬೇಕೇನ್ನುವ ಛಲ. ಹಂಗ ಅದಕ್ಕ, ನೋಡಬೇಕು ಅನ್ನುವ ಛಲ. ಎಷ್ಟು ಆಶ್ಚರ್ಯ.

ತಿರುಗಾಡುತ್ತಿರುವಾಗ ಒಂದು ಅತ್ಯಂತ ಮುದಿ ಮುಪ್ಪಿನ ಮೀನಾ ಸಿಕ್ತು. ಅವಾಗ ಇದು ಕೇಳ್ತು ‘ಬಹಳ ವರ್ಷದ ನೀನು ಹೇಳು, ನನಗೊಂದಿಷ್ಟು ಇಚ್ಚೇ, ನಾನು ಸಾಗರವನ್ನ ಕಾಣಬೇಕಲ್ಲ. ಅದನ್ನ ನೀನು ನೋಡಿದ್ದೀಯ’ ಅಂತ ಕೇಳ್ತು. ಆಗ ದೊಡ್ಡ ಮೀನಾ, ಮುಪ್ಪಿನ ಮೀನು ಹೇಳ್ತು, ‘ನನ್ನ ಜೀವನದಾಗ ಯಾರಿಗ್ಯಾರೆ ಒಂದಿಷ್ಟು ಹೇಳಬೇಕು ಅಂತ ಮಾಡಿದ್ದೇ ಯಾರೂ ಕೇಳಿರಲಿಲ್ಲ. ನೀ ಒಬ್ಬನೆ ಎಲ್ಲದ ಅಂದೆ. ಎಲ್ಲರೂ ತಿನ್ನೋದು, ಉಣ್ಣೋದಾಗ ಮಸ್ತ ಆದರೆ ವಿನಾ, ತಿಳಿಕೊ ಬೇಕು ಅನ್ನೋರು ಯಾರು? ಅಂತು ಮುದಿ ಮೀನಾ. ‘ಎಲ್ಲಾರೂ ಒಂದು ಮೀನಾ ನುಂಗೋದದೆ, ಬದೋಕದದೆ, ಇಷ್ಟು ಗೊತ್ತಿತ್ತೂ ವಿನಾ ಸಾಗರದ ವಿಸ್ತಾರ, ಸಾಮ್ರಾಜ್ಯ ಗೊತ್ತಿರಲಿಲ್ಲ. ನಾನು ಕಂಡೀನಿ ಅಂತು. ಅದಕ್ಕಿಷ್ಟು ಆನಂದ ಆಯ್ತು, ವರುಷ ವರುಷ ಹುಡುಕಾಡ್ತಿತ್ತು. ‘ನನಗೂ ಕಾಣಕ ಸಾಧ್ಯೇನು? ಅಂತು. ಅವಶ್ಯ ಅಂತು ಮುದಿ ಮೀನು. ‘ಎಲ್ಲಿ? ಹೆಂಗಾದ? ಹೇಗ ಕಾಣ್ತದ ಅಂತು. ‘ಅಲ್ಲೇಲ್ಲಿಲ್ಲ, ನೀನು ಏನು ಅದಿಯಲ್ಲ ಅದೇ ಸಾಗರ. ಅದು ಇಲ್ಲ, ನೀನು ಇಲ್ಲಾ, ನೀನು ತೇಲೋದು ಇಲ್ಲ, ನೀನು ಚಲಿಸೋದು ಇಲ್ಲ, ನೀನೇ ಇರೋದಿಲ್ಲ. ಎಂತ ಸಾಗರ ಅದು. ಅವಾಗ ಅದಕ್ಕ ಎಷ್ಟು ಸಂತೋಷ ಆಯ್ತು.

ಮುದಿ ಮೀನ ಹೇಳ್ತು. ತಿಳಿದುಕೊಳ್ಳೋಕೆ ‘ಯಾರಿಗೆ ಆಸಕ್ತಿ ಅದಾ? ಬರಿ ತಿನ್ನೋದರಲ್ಲೇ ಆಸಕ್ತಿ ಅದಾ. ತಿಳಿಕೊಂಡು ಬದುಕೋದಷ್ಟೇ, ಇದೇ ಜೀವನ. ಇಷ್ಟಾದಲ್ಲ, ಇವು ಜಗತ್ತಿನ ರೂಪ, ಇಷ್ಟೆಲ್ಲದಕ್ಕ ಕೂಡಿ ‘ದೃಶ್ಯ ಜಗತ್ತು’ ಅಂತ ಕರಿಯೋದು. ಇದಕ್ಕೆಲ್ಲ ದೃಶ್ಯನೇ ಅನ್ನೊದು.

‘ಆ ಶಕ್ತಿಯಿಂದ ಹಿಡಿದು ಮಾನಸ ಸಾಮರ್ಥ್ಯದವರೆಗೆ ಏನೊಂದು ವಿಶ್ವ ಹರವಿಕೊಂಡದೆ ಇದಕ್ಕೆ ದೃಶ್ಯ ಅಂತೀವಿ. ದೃಶ್ಯ ಅಂತ ಹೇಳಬೇಕಾದರೇ, ಒಬ್ಬ ದೃಷ್ಟ ಬೇಕಾಗ್ತದೆ, ನೋಡಾವ ಒಬ್ಬ ಬೇಕಲ್ಲ. ಆ ನೋಡುವವನೇ ಆತ್ಮ ಅಷ್ಟೇ.

ಆತ್ಮ ಏನು ಮಾಡ್ತದೆ ಅಂದ್ರ ಬರೇ ನೋಡ್ತದೆ ಅಷ್ಟೇ, ಅಂತ ‘ನೋಡುವ ಅರಿವಿನ ಅಥವ ಚೇತನದ ತತ್ವ. ಅಂತಹ ತತ್ವವೇ ಆತ್ಮ’. ಅದಕ್ಕ ಬಣ್ಣಿಲ್ಲ, ಅದಕ್ಕ ಚಲನೆ ಇಲ್ಲ, ಆಕಾರ ಇಲ್ಲಾ, ಅದು ಹೆಣ್ಣು ಅಲ್ಲ, ಗಂಡು ಅಲ್ಲ ,ಅಂತಹದೊಂದು ಚೇತನ, ಶಕ್ತಿ ಅಥವ ತತ್ವ ಅದು. ಇಂತಹ ಆತ್ಮ ಮತ್ತು ತತ್ವ ಒಂದು, ಅದಕ್ಕೆ ದೃಷ್ಟಾ ಅಂತ ಕರಿಯೋದು. ಈ ಜಗತ್ತಿಗೆ ದೃಷ್ಟಿ ಅಂತ ಕರಿಯೋದು. ಈ ಎರಡರ ಜ್ಞಾನ ಸರಿಯಾಗಿ ಆಯ್ತು ಅಂದ್ರ ಮನುಷ್ಯನ ಕಷ್ಟದ ಕ್ಷಣಗಳು ಕಡಿಮೆಯಾಗ್ತಾವ. ಜಗತ್ತು ಒಂದು ಸ್ವರ್ಗವಾಗಿ ಮಾರ್ಪಾಡಾಗುತ್ತದೆ.

ಇಲ್ಲಿ ಪಡಿಯೋದೇನಿಲ್ಲ, ಇಲ್ಲಿ ಅನುಭವಿಸೋದದೆ. ನಾವೇನು ಮಾಡೋದಿಲ್ಲ, ಎಲ್ಲವೂ ಆಗ್ತಾ ಅದ. ಎಷ್ಟು ಅದ್ಬುತ ಜಗತ್ತು. ದೃಶ್ಯ ಹೆಂಗಾದ? ದೃಷ್ಟಾ ಹೆಂಗಾದ? ಇವುಗಳ ಪರಿಜ್ಞಾನ ಒಂದಿಷ್ಟು ಮಾಡಿಕೊಳ್ಳೋದು ತಿಳಿದರೆ ಎಷ್ಟು ಅರಾಮ ಅನಿಸುತ್ತದೆ. ಏಕೆ? ನಮ್ಮ ಸಮಸ್ಯೆಗಳು ಇರೋವು ಏನು ಅಂದ್ರೆ, ‘ಜಗತ್ತು ಹಿಂಗಾ ಇರಬೇಕು. ಆದ್ರಾ ಅದು ಹಂಗ ಇರೋದಿಲ್ಲ. ಆದ್ದರಿಂದ ತಾಪ ಶುರುವಾಗ್ತದೆ. ಅದಕ್ಕೆ ಹಿಂಗಾ ಇರೋದು ಜಗತ್ತು, ಹಿಂಗಾ ಬದಲಾಕೋತ್ತಾ ಇರೋದು ಅಂತ ಗೊತ್ತಾದ್ರ ನಿಶ್ಚಿಂತೆಯಿಂದ ಇರ್ತಾನೆ ಮನುಷ್ಯ. ನಾವು ಯಾವುದನ್ನ ಸ್ಥಿರಗೊಳಿಸಬೇಕು ಅಂತ ಮಾಡಿದ್ದೀವಿ, ಅದೆಲ್ಲಿ ಸ್ಥಿರ ಆಗ್ತದೆ? ನಮ್ಮ ಮನಸ್ಸನ್ನು ಸ್ಥಿರಗೊಳಿಸಬೇಕು ಅಂತ ಮಾಡ್ತೀವಿ, ಅದು ಕಲ್ಪನಾ. ಆದರೆ ಅದನ್ನ ಸ್ಥಿರ ಮಾಡೋಕೆ ಬರೋದಿಲ್ಲ ಅದೊಂದು ಕ್ಷಣ ಅಷ್ಟೇ, ಮರು ಕ್ಷಣ ಬದಲಾಗ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!